ಬೆಂಗಳೂರು: ವೇತನ ಪರಿಷ್ಕರಣೆ, ವೇತನ ಹೆಚ್ಚಳದ ಹಿಂಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಎಸ್ಆರ್ಟಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರ ಹಿಂಪಡೆಯಲಾಗಿದೆ ಎನ್ನುವ ಹೇಳಿಕೆಯನ್ನು ಹೈಕೋರ್ಟ್ ಪರಿಗಣಿಸಿದ್ದು, ಮುಷ್ಕರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಮುಷ್ಕರ ನಡೆಸದಂತೆ ಕೆಎಸ್ಆರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಆದೇಶ ನೀಡಬೇಕೆಂದು ಕೋರಿ ಬೆಂಗಳೂರಿನ ಜೆ. ಸುನಿಲ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ಪೀಠದಲ್ಲಿ ನಡೆದಿದೆ.
ಹೈಕೋರ್ಟ್ ಆದೇಶವನ್ನು ಗೌರವಿಸಿ ತಕ್ಷಣದಿಂದಲೇ ಮುಷ್ಕರ ವಾಪಸ್ ಪಡೆಯಲು ನಿರ್ಣಯ ಕೈಗೊಳ್ಳಲಾಗಿದೆ. ಸದ್ಯ ಮುಷ್ಕರ ನಿಲ್ಲಿಸಲಾಗಿದೆ ಎಂದು ಕಾರ್ಮಿಕ ಸಂಘಟನೆಗಳ ಪರ ವಕೀಲರು ನಿರ್ಣಯದ ಪ್ರತಿ ಸಲ್ಲಿಸಿದ್ದಾರೆ.
ಆಗ ಸರ್ಕಾರಿ ವಕೀಲರು ಬೇಡಿಕೆಗಳನ್ನು ಪರಿಹರಿಸುವ ಸಂಬಂಧ ಸರ್ಕಾರ ಮತ್ತು ಕಾರ್ಮಿಕ ಸಂಘಟನೆಗಳಂತೆ ಸಂಧಾನ ಮಾತುಕತೆ ಮುಂದುವರೆದಿದೆ. ಗುರುವಾರ ಕೂಡ ಮಾತುಕತೆ ನಡೆದಿದ್ದು, ಆಗಸ್ಟ್ 28ಕ್ಕೆ ಮತ್ತೆ ಸಂಧಾನ ಸಭೆ ನಿಗದಿಯಾಗಿದೆ ಎಂದು ತಿಳಿಸಿದ್ದಾರೆ. ಮುಷ್ಕರ ಹಿಂಪಡೆಯಲಾಗಿದೆ ಎಂಬ ಹೇಳಿಕೆಯನ್ನು ಪರಿಗಣಿಸಿದ ಹೈಕೋರ್ಟ್ ಮುಷ್ಕರ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಇತ್ಯರ್ಥಪಡಿಸಿದೆ.