ಅಂಬ್ರೋಹಾ (ಉತ್ತರ ಪ್ರದೇಶ): (ಡಿಸೆಂಬರ್ 10) ಉತ್ತರ ಪ್ರದೇಶದ ಅಂಬ್ರೋಹಾ ಜಿಲ್ಲೆಯ ಗಜ್ರೌಲಾ ಪ್ರದೇಶದಲ್ಲಿ ಮಲಗಿದ್ದ ಪೋಷಕರ ಮಧ್ಯೆ ಆಕಸ್ಮಿಕವಾಗಿ ಸಿಕ್ಕಿ ನವಜಾತ ಶಿಶುವೊಂದು ಸಾವನ್ನಪ್ಪಿದೆ ಎಂದು ಪೊಲೀಸರು ಮತ್ತು ಕುಟುಂಬ ಸದಸ್ಯರು ಬುಧವಾರ ತಿಳಿಸಿದ್ದಾರೆ.
ಮೃತ ಶಿಶು ಸೂಫಿಯಾನ್ ನವೆಂಬರ್ 10 ರಂದು ಜನಿಸಿದ್ದು, ಇವರು ಸದ್ದಾಂ ಅಬ್ಬಾಸಿ (25) ಮತ್ತು ಅವರ ಪತ್ನಿ ಅಸ್ಮಾ ಅವರ ಏಕೈಕ ಮಗುವಾಗಿದ್ದ. ಶನಿವಾರ ರಾತ್ರಿ ದಂಪತಿಗಳು ಮಲಗಲು ಹೋಗುವ ಮೊದಲು ಮಗುವನ್ನು ತಮ್ಮ ಹಾಸಿಗೆಯ ಮಧ್ಯದಲ್ಲಿ ಮಲಗಿಸಿದಾಗ ಈ ಘಟನೆ ಸಂಭವಿಸಿದೆ.
ಕುಟುಂಬ ಸದಸ್ಯರ ಪ್ರಕಾರ, ರಾತ್ರಿಯ ಸಮಯದಲ್ಲಿ ಮಲಗಿದ್ದ ಪೋಷಕರಿಬ್ಬರೂ ಅರಿವಿಲ್ಲದೆ ತಮ್ಮ ಬದಿಯನ್ನು ಬದಲಾಯಿಸಿದ್ದಾರೆ. ಪರಿಣಾಮವಾಗಿ, ಕೇವಲ 26 ದಿನದ ಹಸುಗೂಸು ಅವರ ಮಧ್ಯೆ ಸಿಕ್ಕಿಹಾಕಿಕೊಂಡಿದೆ. ಈ ಆಕಸ್ಮಿಕ ದುರಂತದಿಂದಾಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎನ್ನಲಾಗಿದೆ.
