ಬೆಂಗಳೂರು : ತೆರಿಗೆ ನೋಟಿಸ್ ಗೆ ವ್ಯಾಪಾರಿಗಳು ಬೆಚ್ಚಿ ಬಿದ್ದಿದ್ದು, ಬೆಂಗಳೂರಿನ ಹಲವೆಡೆ ಯುಪಿಐ QR ಕೋಡ್ ಗೆ ಕೊಕ್ ಬಿದ್ದಿದೆ.
ಹೌದು, 40 ಲಕ್ಷ ರು.ಗಿಂತ ಹೆಚ್ಚಿನ ವಹಿವಾಟಿಗೆ ಜಿಎಸ್ಟಿ ತೆರಿಗೆ ನೋಟಿಸ್ ಬಂದ ಹಿನ್ನೆಲೆ ವ್ಯಾಪಾರಿಗಳು ಬೆಚ್ಚಿ ಬಿದ್ದಿದ್ದು, ಯುಪಿಐ ಮೂಲಕ ಹಣ ಸ್ವೀಕಾರಕ್ಕೆ ನಿರಾಕರಿಸುತ್ತಿದ್ದಾರೆ.
ಅಂಗಡಿಗಳಲ್ಲಿನ ಟೇಬಲ್ ಮೇಲೆ ರಾರಾಜಿಸುತ್ತಿದ್ದ ಯುಪಿಐ QR ಕೋಡ್ ಮರೆಯಾಗುತ್ತಿವೆ. ಗೋಡೆಗೆ ಅಂಟಿಸಿದ QR ಕೋಡ್ ನ್ನು ವ್ಯಾಪಾರಿಗಳು ತೆಗೆದು ಹಾಕುತ್ತಿದ್ದಾರೆ. ಆನ್ ಲೈನ್ ಪೇಮೆಂಟ್ ನೋಡಿ ಟ್ಯಾಕ್ಸ್ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 40 ರಿಂದ 60 ಲಕ್ಷ ರೂ. 1 ಕೋಟಿವರೆಗೂ ದಂಡ ವಿಧಿಸಿದ್ದು, ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ಗೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಏನಿದೆ ವಾಣಿಜ್ಯ ತೆರಿಗೆ ಇಲಾಖೆ ಇಲಾಖೆ ಸುತ್ತೋಲೆಯಲ್ಲಿ..?
ಕರ್ನಾಟಕದ ಹಲವು ಟಿ.ವಿ. ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಸಣ್ಣಪುಟ್ಟ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆಯು ನೀಡಿರುವ ನೋಟಿಸುಗಳ ಬಗ್ಗೆ ವರದಿಯಾಗಿರುತ್ತದೆ. ಈ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆಯು ಈ ಕೆಳಕಂಡ ಮಾಹಿತಿಯನ್ನು ನೀಡಿರುತ್ತದೆ.
ಜುಲೈ 1, 2017 ರಿಂದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯು ದೇಶಾದ್ಯಂತ ಜಾರಿಗೆ ಬಂದಿರುತ್ತದೆ. ಈ ಕಾಯ್ದೆಯ ಕಲಂ 22 ರನ್ವಯ ಸರಕು ಪೊರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 40 ಲಕ್ಷ ರೂಪಾಯಿಗಳನ್ನು ಮೀರಿದರೆ ಅಥವಾ ಸೇವೆಗಳ ಪೊರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂಪಾಯಿಗಳನ್ನು ಮೀರಿದರೆ ಜಿ.ಎಸ್.ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಸಮಗ್ರ ವಹಿವಾಟಿನಲ್ಲಿ (exempted & Taxable) ಸರಕು ಮತ್ತು ಸೇವೆಗಳು ಸೇರಿರುತ್ತದೆ. ಆದರೆ ತೆರಿಗೆ ಬಾಧ್ಯತೆಯು Taxable ಸರಕುಗಳು & ಸೇವೆಗಳಿಗೆ ಮಾತ್ರ ಅನ್ವಯವಾಗುತ್ತದೆ. ತೆರಿಗೆ ಬಾದ್ಯತೆಯು ಮಾರಾಟ ಮಾಡಿದ ಸರಕುಗಳ ಪ್ರಕಾರ ನಿರ್ದರಿಸಲ್ಪಡುತ್ತದೆ. (ಉದಾಹರಣೆಗೆ ಬ್ರೆಡ್ ಮಾರಾಟದ ಮೇಲೆ ತೆರಿಗೆ ಇರುವುದಿಲ್ಲ. ಕುರುಕುಲು ತಿಂಡಿಗಳ ಮೇಲೆ 5% ತೆರಿಗೆ ಬಾಧ್ಯತೆ ಇರುತ್ತದೆ).
ವಾಣಿಜ್ಯ ತೆರಿಗೆಗಳ ಇಲಾಖೆಯು ಏಕೀಕೃತ ಪಾವತಿ ವ್ಯವಸ್ಥೆ (ಯೂ.ಪಿ.ಐ) ಯ ಮೂಲಕ ವರ್ತಕರು 2021-22 ರಿಂದ 2024-25ರ ಸಾಲಿನಲ್ಲಿ ಸ್ವೀಕರಿಸಿರುವ ಹಣದ ವಿವರಗಳನ್ನು ವಿವಿಧ ಯೂ.ಪಿ.ಐ ಸೇವೆಗಳ ಪೂರೈಕೆದಾರರಿಂದ ಸಂಗ್ರಹಿಸಿರುತ್ತದೆ. ವರ್ತಕರು ಮಾರಾಟದ ಹಣವನ್ನು (ಯೂ.ಪಿ.ಐ) ಮಾತ್ರವಲ್ಲದೇ ನಗದು ಮತ್ತು ಇತರ ವಿಧಾನಗಳಲ್ಲಿ ಕೂಡ ಪಡೆಯುತ್ತಾರೆ. ಹಾಗಾಗಿ, ಯೂ.ಪಿ.ಐ ಮೂಲಕ 40 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದಿರುವ ವರ್ತಕರ ವಾರ್ಷಿಕ ವಹಿವಾಟು ಇನ್ನೂ ಗಣನೀಯವಾಗಿ ಹೆಚ್ಚಾಗಿರುತ್ತದೆ. ಸದರಿ ಮಾಹಿತಿಯನ್ನು ಪರಿಶೀಲಿಸಿ, 40 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ – 2017 ರಡಿಯಲ್ಲಿ ನೋಂದಣಿಯನ್ನು ಪಡೆಯದೆ. ತೆರಿಗೆ ಪಾವತಿಸದೆ ಇರುವ ವರ್ತಕರಿಗೆ ನೋಟೀಸನ್ನು ಜಾರಿಗೊಳಿಸಲಾಗಿರುತ್ತದೆ. ಈ ನೋಟಿಸುಗಳಿಗೆ, ವರ್ತಕರು ತಾವು ಮಾರಾಟ ಮಾಡಿದ ಸರಕು ಮತ್ತು ಸೇವೆಗಳ ವಿವರಗಳನ್ನು ನೀಡಿ ಸರಿಯಾದ ತೆರಿಗೆಯನ್ನು ಪಾವತಿಸಬೇಕಾಗಿರುತ್ತದೆ.
ಇಂತಹ ವರ್ತಕರು ತಕ್ಷಣ ನೋಂದಣಿ ಪಡೆಯಬೇಕಾಗಿರುತ್ತದೆ. ವಾರ್ಷಿಕ ವಹಿವಾಟು 1.5 ಕೋಟಿ ರೂಪಾಯಿಗಳಿಗಿಂತ ಕಡಿಮೆ ಇರುವ ಸಣ್ಣ ವರ್ತಕರು ರಾಜಿ ತೆರಿಗೆಯನ್ನು ಆಯ್ಕೆ ಮಾಡಿ. ಇನ್ನು ಮುಂದೆ 1% ತೆರಿಗೆ ಪಾವತಿಸಬಹುದಾಗಿರುತ್ತದೆ.ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಮಾಹಿತಿಯನ್ನು ಇಲಾಖೆಯ ಜಾಲತಾಣhttps://gst.kar.nic.in/ ದಲ್ಲಿ ಪಡೆಯಬಹುದಾಗಿರುತ್ತದೆ ಎಂದು ಪ್ರಕಟಣೆ ಹೊರಡಿಸಿದೆ.
