ದೆಹಲಿಯಲ್ಲಿ ತಡರಾತ್ರಿ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ದಂಪತಿಗೆ ಇಬ್ಬರು ಯುವಕರು ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತ ಪತಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದು, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದ್ದಾರೆ.
ಏಪ್ರಿಲ್ 8 ರಂದು ಪೂರ್ವ ದೆಹಲಿಯ ಪಾಂಡವ್ ನಗರದ ಬಳಿ ಈ ಘಟನೆ ನಡೆದಿದೆ ಎಂದು ಅನಾಮಧೇಯ ವ್ಯಕ್ತಿಯೊಬ್ಬರು ರೆಡ್ಡಿಟ್‌ನಲ್ಲಿ ವಿವರಿಸಿದ್ದಾರೆ. ಪತ್ನಿಯೊಂದಿಗೆ ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಇಬ್ಬರು ಯುವಕರು ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿ ನಕ್ಕಿದ್ದಾರೆ. ನಂತರ ವೇಗವಾಗಿ ಬೈಕ್ ಚಲಾಯಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 24 ರ ಕಡೆಗೆ ಪರಾರಿಯಾಗಿದ್ದಾರೆ.
ತಕ್ಷಣವೇ ಪೊಲೀಸರಿಗೆ ದೂರು ನೀಡಿದರೂ, ಅವರಿಂದ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಸಂತ್ರಸ್ತ ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪೊಲೀಸ್ ಅಧಿಕಾರಿಗಳು ಪ್ರಕರಣದಲ್ಲಿ ಆಸಕ್ತಿ ತೋರಿದಂತೆ ಕಾಣಲಿಲ್ಲ. ಅವರಿಂದ ನನಗೆ ಯಾವುದೇ ನಿರೀಕ್ಷೆಯಿಲ್ಲ” ಎಂದು ಅವರು ಹೇಳಿದ್ದಾರೆ.
ಆದರೆ, ಕಿರುಕುಳ ನೀಡಿದವರು ಪರಾರಿಯಾಗುತ್ತಿರುವ ವಿಡಿಯೋ ತುಣುಕು ಮತ್ತು ವಾಹನದ ನಂಬರ್ ಪ್ಲೇಟ್ (DL10AF5999) ಸ್ಪಷ್ಟವಾಗಿ ಕಾಣುವಂತಹ ಪ್ರಮುಖ ಸಾಕ್ಷ್ಯಗಳು ದಂಪತಿಯ ಬಳಿ ಇವೆ. ಅಲ್ಲದೆ, ಆರೋಪಿಗಳಲ್ಲೊಬ್ಬನ ಮುಖದ ಭಾಗಶಃ ಚಿತ್ರವೂ ಲಭ್ಯವಿದೆ.
ತಮ್ಮ ಅಸಹಾಯಕತೆಯನ್ನು ತೋಡಿಕೊಂಡ ಆ ವ್ಯಕ್ತಿ, “ನಾನು ದುರ್ಬಲನಾಗಿ ಮತ್ತು ಅಸಹಾಯಕನಾಗಿ ಭಾವಿಸುತ್ತಿದ್ದೇನೆ. ಈ ದೇಶದ ಕಾನೂನುಗಳು ಮತ್ತು ಜನರ ಬಗ್ಗೆ ನನಗೆ ಪ್ರಶ್ನೆಗಳಿವೆ. ಮಹಿಳೆಯರು ಸುರಕ್ಷಿತವಾಗಿಲ್ಲ ಮತ್ತು ಕೆಲವರು ಯಾವುದೇ ಪರಿಣಾಮಗಳಿಲ್ಲದೆ ಅಪರಾಧಗಳನ್ನು ಮಾಡಲು ಹೆಚ್ಚು ಆರಾಮದಾಯಕವಾಗುತ್ತಿದ್ದಾರೆ” ಎಂದು ನೋವಿನಿಂದ ನುಡಿದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.