ಬೆಂಗಳೂರು : ಮುಂಗಾರು ಹಂಗಾಮಿನ ಮಳೆ ಸುರಿಯದ ಕಾರಣ ತರಕಾರಿ ಬೆಲೆ ಗಗನಕ್ಕೇರಿದ್ದು, ಟೊಮ್ಯಾಟೊ ಶತಕ ಬಾರಿಸಿ ಮುನ್ನುಗ್ಗುತ್ತಿದೆ.
ಒಂದು ಕೆಜಿ ಟೊಮ್ಯಾಟೋ 100 ರಿಂದ 120 ರೂವರೆಗೆ ಮಾರಾಟವಾಗುತ್ತಿದೆ. ಒಂದು ಕೆ.ಜಿ ಟೊಮೆಟೋಗೆ ಹಾಪ್ ಕಾಮ್ಸ್ ನಲ್ಲಿ 110 ರೂ., ಆನ್ ಲೈನ್ ಶಾಪಿಂಗ್ ನಲ್ಲಿ 120 ರೂ. ಆಗಿದೆ. ಈ ಹಿನ್ನೆಲೆ ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ. ಸಾಂಬಾರು, ಗೊಜ್ಜು ಮಾಡಲು ಟೊಮ್ಯಾಟೋ ಬೇಕೇ ಬೇಕು. ಟೊಮ್ಯಾಟೋ ಬೆಲೆ ಸೇಬಿನ ಬೆಲೆಯಷ್ಟಾಗಿದ್ದು, ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತರಕಾರಿ ಬೆಲೆ ಏರಿಕೆ ಹಿನ್ನೆಲೆ ಕೆಲವರು ನಾನ್ ವೆಜ್ ಗಳ ಮೊರೆ ಹೋಗಿದ್ದಾರೆ.
ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಸೇರಿದಂತೆ ಬೆಂಗಳೂರು ಸುತ್ತಮುತ್ತ ಭಾಗಗಳಲ್ಲಿ ಟೊಮೆಟೋ ಬೆಳೆ ನಾಶವಾಗಿದೆ. ಹೀಗಾಗಿ ದರದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ. ಮೇ ತಿಂಗಳ ಮೂರನೇ ವಾರದಲ್ಲಿ ಬೆಂಗಳೂರಿನಲ್ಲಿ ಟೊಮೆಟೊ ದರವು ಪ್ರತಿ ಕೆಜಿಗೆ 40 ರೂಪಾಯಿ ಆಗಿತ್ತು. ಆದರೆ ಈಗ ದಿಡೀರ್ ಆಗಿ 125 ರೂಪಾಯಿಗೆ ಹೆಚ್ಚಳಗೊಂಡಿದೆ. ಉಳಿದ ತರಕಾರಿ ಬೆಲೆ ಬಾರಿ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಬೀನ್ಸ್ ಕೆಜಿಗೆ 200 ರೂ ಮಾರಾಟವಾಗುತ್ತಿದ್ದು, ಬೆಂಡೆಕಾಯಿ ಕೆಲವು ಕಡೆ 80 ರೂಗೆ ಮಾರಾಟವಾಗುತ್ತಿದೆ.ಪಾಲಕ್, ಮೆಂತೆ, ಕೊತ್ತಂಬರಿ, ಪುದೀನಾ ಸೊಪ್ಪು ಕಟ್ಟಿಗೆ 20 ರಿಂದ 25 ರೂಗೆ ಮಾರಾಟವಾಗುತ್ತಿದೆ. ತಾಪಮಾನ ಏರಿಕೆ, ಮಳೆಯಿಂದಾಗಿ ತರಕಾರಿ ಮತ್ತು ಸೊಪ್ಪುಗಳ ದರ ಗಗನಕ್ಕೇರಿವೆ ಮುಂಗಾರು ಮಳೆ ಕೈಕೊಟ್ಟಿದ್ದು ತರಕಾರಿಗೆ ಬೇಡಿಕೆ ಹೆಚ್ಚಾಗಿದೆ.