ಗದಗ: ಕೆಲ ದಿನಗಳ ಹಿಂದಷ್ಟೇ ಬಂಗಾರದ ಬೆಲೆಯಲ್ಲಿ ಮಾರಾಟವಾಗಿದ್ದ ಟೊಮೆಟೋ ಬೆಲೆ ಇದೀಗ ದಿಢೀರ್ ಕುಸಿತವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಗದಗ ಎಪಿಎಂಸಿ ಮಾರುಕಟ್ಟೆಗೆ ಟೊಮೆಟೋ ಸೇರಿದಂತೆ ಹಲವು ತರಕಾರಿಗಳನ್ನು ಹೊತ್ತು ತಂದ ರೈತರು ಏಕಾಏಕಿ ಬೆಲೆ ಕುಸಿತಕ್ಕೆ ಕಣ್ಣೀರಾಗಿದ್ದಾರೆ. ಇದ್ದಕ್ಕಿದ್ದಂತೆ ಟೊಮೆಟೋ, ಬದನೆಕಾಯಿ, ನುಗ್ಗೆಕಾರಿ ಬೆಲೆ ಕುಸಿತವಾಗಿದೆ. 25 ಕೆಜಿಯ ಒಂದು ಕ್ರೇಟ್ ಕೇವಲ 50 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ಭಾರಿ ನಷ್ಟ ಉಂಟಾಗಿದೆ.
ಒಂದು ಕ್ರೇಟ್ ಕೇವಲ 50 ರೂಪಾಯಿಗೆ ರೈತರಿಂದ ಖರೀದಿಸಿದರೆ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಕೆಜಿಗೆ ಕೇವಲ 2 ರೂಪಾಯಿ ಆಗಿದೆ. ಬದನೆಕಾರಿ ಬೆಲೆಯೂ ಕುಸಿತವಾಗಿದೆ. ಇದರಿಂದ ರೈತರಿಗೆ ಎಪಿಎಂಸಿಗೆ ತರಕಾರಿಗಳನ್ನು ತಂದು ಹಾಕಿದ ಬಿಡಿಗಾಸು ಕೂಡ ಸಿಗುತ್ತಿಲ್ಲ. ಬರಿ ಬಿಲ್ ಹಿಡಿದು ಖಾಲಿ ಕೈಯಲ್ಲಿ ವಾಪಾಸ್ ಆಗಬೇಕಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಮಾತ್ರ ಏರುತ್ತಿದೆ. ಆದರೆ ರೈತರು ಬೆಳೆದ ಬೆಳೆಗಳ ಬೆಲೆ ಏರಿಕೆಯಾಗುತ್ತಿಲ್ಲ. ಬದಲಾಗಿ ಕುಸಿತವಾಗುತ್ತಿದೆ. ಇದರಿಂದ ಅನ್ನದಾತರು ಬದುಕುವುದಾದರೂ ಹೇಗೆ ಸಾಲ ಮಾಡಿ ಬೆಳೆದ ಬೆಳೆಗಳ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದರೆ ರೈತರು ಸಾಲ ತೀರಿಸುವುದಾದರೂ ಹೇಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.