ವಿಜಯನಗರ: ಟೊಮ್ಯಾಟೋ, ಈರುಳ್ಳಿ ಬೆಲೆ ದಿಢೀರ್ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕಂಗಾಲಾದ ರೈತರು ಪ್ರತಿಭಟನೆ ನಡೆಸಿದ್ದಾರೆ. ವಿಜಯನಗರ, ಬೆಳಗಾವಿ ಜಿಲ್ಲೆಯಲ್ಲಿ ರೈತರು ರಸ್ತೆಯಲ್ಲಿ ಟೊಮ್ಯಾಟೋ, ಈರುಳ್ಳಿ, ಎಲೆಕೋಸು ಸುರಿದು ಧರಣಿ ನಡೆಸಿರುವ ಘಟನೆ ನಡೆದಿದೆ.
ಟೊಮ್ಯಾಟೊ ಕೆಜಿಗೆ 2 ರೂಪಾಯಿ, ಈರುಳ್ಳಿ ಕೆಜಿಗೆ 5 ರೂಪಾಯಿ ಆಗಿದ್ದು, ಬೆಲೆ ಕುಸಿತದಿಂದ ಕಂಗೆಟ್ಟು ಹೋಗಿರುವ ರೈತರು ಆಕ್ರೋಶ ವ್ಯಕ್ತಪಡಡಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಉತ್ತಂಗಿಯಲ್ಲಿ ಟೊಮ್ಯಾಟೋ, ಈರುಳ್ಳಿ ಬೆಳೆಗಾರರು, ರೈತ ಸಂಘಟನೆಗಳು ಒಂದು ಟ್ರ್ಯಾಕ್ಟರ್ ಟೊಮೆಟೋ, ಈರುಳ್ಳಿ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಬದನೆಕಾಯಿ, ನುಗ್ಗೆಕಾಯಿ, ಎಲೆಕೋಸಿನ ಬೆಲೆಯೂ ಭಾರಿ ಕುಸಿತವಾಗಿದ್ದು, ತರಕಾರಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿಯೂ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಎಲೆಕೋಸು ಬೆಳೆಗಾರ ರೈತರು ಬೆಳಗಾವಿಯ ಡಿಸಿ ಕಚೇರಿ ಎದಿರು ಎಲೆಕೋಸುಗಳನ್ನು ರಸ್ತೆಯಲ್ಲಿ ಸುರಿದು ಧರಣಿ ನಡೆಸಿರುವ ಘಟನೆ ನಡೆದಿದೆ.
ಅಗತ್ಯವಸ್ತುಗಳ ದರ, ಪೆಟ್ರೋಲ್, ಡೀಸೆಲ್ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ರೈತರು ಬೆಳೆಯುವ ಬೆಳೆಗಳ ಬೆಲೆಗಳು ಮಾತ್ರ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ತರಕಾರಿ ಬೆಳೆಗಾರರು, ಅನ್ನದಾತರ ಬದುಕು ದುಸ್ತರವಾಗಿತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.