ಬೆಂಗಳೂರು: ರಾಜ್ಯದ ವಿವಿಧೆಡೆ ಇನ್ನೂ ಒಂದು ವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಶನಿವಾರ ಮಳೆಯಾಗಿದೆ. ಶಿವಮೊಗ್ಗದಲ್ಲಿ ಶನಿವಾರ ಸಂಜೆ 6:30ರ ವೇಳೆಗೆ ಆರಂಭವಾದ ಮಳೆ ಒಂದೂವರೆ ಗಂಟೆ ಕಾಲ ಆರ್ಭಟಿಸಿತು. ಭದ್ರಾವತಿ, ತೀರ್ಥಹಳ್ಳಿ, ಸೊರಬ ತಾಲೂಕಿನಲ್ಲಿ ಗುಡುಗು ಸಹಿತ ಮಳೆಯಾಗಿದೆ.
ದಾವಣಗೆರೆ ಜಿಲ್ಲೆ ಮಲೆಬೆನ್ನೂರು ವ್ಯಾಪ್ತಿಯಲ್ಲಿ ಬಿರುಗಾಳಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ನ್ಯಾಮತಿ ತಾಲೂಕು ಹೊನ್ನಾಳಿ ತಾಲೂಕಿನ ಹಲವೆಡೆ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಸೇರಿ ಹಲವು ಕಡೆಗಳಲ್ಲಿ ಮಳೆಯಾಗಿದೆ. ಕಲಬುರಗಿ ಜಿಲ್ಲೆಯ ಶಹಾಬಾದ್, ಜೇವರ್ಗಿ ತಾಲೂಕಿನ ಹಲವು ಕಡೆಗಳಲ್ಲಿ ಮಳೆಯಾಗಿದೆ. ಚಾಮರಾಜನಗರ ಜಿಲ್ಲೆ ಬೇಗೂರಿನಲ್ಲಿ 9 ಸೆಂ.ಮೀ., ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರದಲ್ಲಿ 8 ಸೆಂ.ಮೀ. ಮಳೆಯಾಗಿದೆ. ಗುಂಡ್ಲುಪೇಟೆ, ಬಂಡೀಪುರದಲ್ಲಿಯೂ ಹೆಚ್ಚಿನ ಮಳೆಯಾಗಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳ ಹಲವು ಕಡೆ ಭಾನುವಾರ ಸಾಧಾರಣ ಮಳೆ ಆಗಲಿದೆ.
ಏಪ್ರಿಲ್ 7ರಿಂದ 12ರವರೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.