ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಾದೇವಪುರ ಬೋರೆ ಗ್ರಾಮದ ಬಳಿ ರಾಮಸ್ವಾಮಿ ನಾಲೆಗೆ ಬಟ್ಟೆ ಒಗೆಯಲು ಮತ್ತು ಪಾತ್ರೆ ತೊಳೆಯಲು ಬಂದಿದ್ದ ಆರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಈ ವೇಳೆ ಮೂವರನ್ನು ಸ್ಥಳೀಯರು ಕಾಲುವೆಯಿಂದ ರಕ್ಷಿಸಿದ್ದು ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಮೈಸೂರಿನ ಉದಯಗಿರಿ ಹಜೀರಾ ನಿಶ್ವಾನ್ ಅರೇಬಿಕ್ ಶಾಲೆಯಲ್ಲಿ ಕಲಿಯುತ್ತಿರುವ 15 ವಿದ್ಯಾರ್ಥಿಗಳು ಮತ್ತು ಇತರೆ ನಾಲ್ವರು ಟಾಟಾ ಏಸ್ ನಲ್ಲಿ ನಾಲೆಗೆ ಬಟ್ಟೆ, ಪಾತ್ರೆ ತೊಳೆಯಲು ಬಂದಿದ್ದಾರೆ.
ಪಾತ್ರೆಗಳನ್ನು ಮುಳುಗಿಸಿ ತೆಗೆಯುವಾಗ ಒಬ್ಬ ಹುಡುಗ ನೀರಲ್ಲಿ ಕೊಚ್ಚಿ ಹೋಗಿದ್ದಾನೆ. ಆತನನ್ನು ರಕ್ಷಿಸಲು ಆರು ಮಂದಿ ನಾಲೆಗೆ ಇಳಿದಿದ್ದಾರೆ. ಸ್ಥಳದಲ್ಲಿದ್ದ ಸ್ಥಳೀಯರು ಮೂವರನ್ನು ರಕ್ಷಣೆ ಮಾಡಿದ್ದಾರೆ. 9ನೇ ತರಗತಿಯ ಹನೀಫ್, 7ನೇ ತರಗತಿಯ ತರ್ಬನ್ ಮತ್ತು ಆಫ್ರಿನ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳೀಯರು ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಆಯೇಷಾ ರಕ್ಷಣೆ ಮಾಡಿದ್ದು ಆಸ್ಪತ್ರೆಗೆ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಾಗಿದ್ದ ಆಯೇಷಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಅಲ್ಫಿಯಾ(22), ಮಹಮ್ಮದ್ ಗೌಸ್(13) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿಗಳಿಗಾಗಿ ಇಂದು ಶೋಧ ಕಾರ್ಯ ಮುಂದುವರೆಯಲಿದೆ. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
