ಭಿಂಡ್: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ದಲಿತ ವ್ಯಕ್ತಿಯನ್ನು ಥಳಿಸಿ ಬಲವಂತದಿಂದ ಎರಡು ಬಾರಿ ಮೂತ್ರ ಕುಡಿಸಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಸೋನು ಬರುವಾ, ಅಲೋಕ್ ಶರ್ಮಾ ಮತ್ತು ಛೋಟು ಓಜಾ ಬಂಧಿತ ಆರೋಪಿಗಳು. ಈ ಮೂವರ ವಿರುದ್ಧ ಎಸ್.ಸಿ., ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ, ಬಿಎನ್ಎಸ್ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಭಿಂಡ್ ಹೆಚ್ಚುವರಿ ಎಸ್ಪಿ ಸಂಜೀವ್ ಪಾಠಕ್ ತಿಳಿಸಿದ್ದಾರೆ.
ಸಂತ್ರಸ್ತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತ ವ್ಯಕ್ತಿಯು ಮುಖ್ಯ ಆರೋಪಿಯ ವಾಹನ ಚಾಲಕನಾಗಿದ್ದು, ಕೆಲಸ ಬಿಟ್ಟಿದ್ದಕ್ಕಾಗಿ ಆತನ ಮೇಲೆ ಹಲ್ಲೆ ನಡೆಸಿ ಕೃತ್ಯವೆಸಗಿದ್ದಾರೆ.
ಗ್ವಾಲಿಯರ್ ನಲ್ಲಿರುವ ನನ್ನ ಮಾವನ ಮನೆಯಿಂದ ಅಪಹರಿಸಿ ಭಿಂಡ್ ಗೆ ಕರೆತಂದಿದ್ದಾರೆ. ಪೈಪ್ ನಿಂದ ಥಳಿಸಿದ ಆರೋಪಿಗಳು ದಾರಿ ಮಧ್ಯೆ ವಾಹನ ನಿಲ್ಲಿಸಿ ಬಾಟಲಿಯೊಂದರಲ್ಲಿದ್ದ ಮೂತ್ರವನ್ನು ಬಲವಂತವಾಗಿ ಕುಡಿಸಿದ್ದಾರೆ. ನಂತರ ಆಕತ್ಪುರ ಗ್ರಾಮಕ್ಕೆ ಕರೆದೊಯ್ದು ಸರಪಳಿಯಿಂದ ಕಟ್ಟಿ ಹಾಕಿ ಮತ್ತೊಮ್ಮೆ ಮೂತ್ರ ಕುಡಿಸಿದ್ದಾರೆ ಎಂದು ಸಂತ್ರಸ್ತ ದೂರಿದ್ದಾರೆ.