1982ರಲ್ಲಿ ಬಿಡುಗಡೆಯಾದ ರಿಚರ್ಡ್ ಅಟೆನ್‌ಬರೋ ನಿರ್ದೇಶನದ ‘ಗಾಂಧಿ’ ಚಿತ್ರ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಮಹಾತ್ಮ ಗಾಂಧೀಜಿಯವರ ಜೀವನವನ್ನು ಆಧರಿಸಿದ ಈ ಚಿತ್ರದಲ್ಲಿ ಬೆನ್ ಕಿಂಗ್ಸ್ಲಿ ಅವರು ಗಾಂಧೀಜಿಯ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ರೋಹಿಣಿ ಹಟ್ಟಿಯಂಗಡಿ, ರೋಷನ್ ಸೇಠ್, ಸಯೀದ್ ಜಾಫ್ರಿ ಮತ್ತು ವೀರೇಂದ್ರ ರಾಜ್‌ದಾನ್ ಅವರು ಕಸ್ತೂರಬಾ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ ಮತ್ತು ಯುನೈಟೆಡ್ ಕಿಂಗ್ಡಮ್‌ನ ಸಹಯೋಗದಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಭಾರತ ಸರ್ಕಾರವು ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಮೂಲಕ ಹಣಕಾಸಿನ ನೆರವು ನೀಡಿತ್ತು.
ಈ ಚಿತ್ರವು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿದೆ ಎಂಬುದು ನಿಮಗೆ ತಿಳಿದಿದೆಯೇ ? ಹೌದು, ಮಹಾತ್ಮ ಗಾಂಧೀಜಿಯವರ ಅಂತ್ಯಕ್ರಿಯೆಯ ದೃಶ್ಯಕ್ಕಾಗಿ ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಕಲಾವಿದರನ್ನು ಬಳಸಲಾಗಿತ್ತು! ಈ ಕಾರಣದಿಂದಾಗಿ, ‘ಗಾಂಧಿ’ ಚಿತ್ರವು “ಅತ್ಯಂತ ಹೆಚ್ಚು ಸಿನಿಮಾ ಕಲಾವಿದರು” ಎಂಬ ವಿಭಾಗದಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಈ ದೃಶ್ಯವನ್ನು ದೆಹಲಿಯ ರಾಜಪಥದಲ್ಲಿ ಒಂದೇ ಬೆಳಿಗ್ಗೆ ಚಿತ್ರೀಕರಿಸಲಾಗಿತ್ತು. ಇದಕ್ಕಾಗಿ ಸುಮಾರು 2 ಲಕ್ಷ ಸ್ವಯಂಸೇವಕರು ಮತ್ತು 94,560 ಗುತ್ತಿಗೆ ಪಡೆದ ಕಲಾವಿದರು ಭಾಗವಹಿಸಿದ್ದರು.
‘ಗಾಂಧಿ’ ಚಿತ್ರ ಕೇವಲ ವಿಶ್ವ ದಾಖಲೆಯನ್ನು ಮಾತ್ರ ಸೃಷ್ಟಿಸಲಿಲ್ಲ, ಬದಲಾಗಿ ವಿಮರ್ಶಾತ್ಮಕವಾಗಿಯೂ ಮತ್ತು ವಾಣಿಜ್ಯವಾಗಿಯೂ ಯಶಸ್ವಿಯಾಯಿತು. ಅಷ್ಟೇ ಅಲ್ಲದೆ, ಈ ಚಿತ್ರವು 8 ಆಸ್ಕರ್ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತು. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ (ರಿಚರ್ಡ್ ಅಟೆನ್‌ಬರೋ), ಅತ್ಯುತ್ತಮ ನಟ (ಬೆನ್ ಕಿಂಗ್ಸ್ಲಿ) ಸೇರಿದಂತೆ ಹಲವು ಪ್ರಮುಖ ಪ್ರಶಸ್ತಿಗಳನ್ನು ಈ ಚಿತ್ರ ಗೆದ್ದುಕೊಂಡಿತು. ಭಾನು ಅಥೈಯಾ ಅವರು ಈ ಚಿತ್ರದ ಮೂಲಕ ಆಸ್ಕರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.