ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಕಾವೂರಿನ ಸಹಕಾರಿ ಸಂಸ್ಥೆಯೊಂದರಲ್ಲಿ ಅಸಲಿ ಚಿನ್ನವೆಂದು ನಂಬಿಸಿ ನಕಲಿ ಚಿನ್ನಾಭರಣಗಳನ್ನು ಒತ್ತೆ ಇಟ್ಟು 6.24 ಲಕ್ಷ ರೂ. ವಂಚಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಆಕಾಶಭವನದ ಆನಂದನಗರದ ಆರಿಫ್ ಅಬೂಬಕರ್(39) ನಂತೂರು ಬಿಕರ್ನಕಟ್ಟೆ ಮೊಹಮ್ಮದ್ ಆಶಿಕ್ ಕಟ್ಟತ್ತಾರ್ ಹುಸೇನ್(34), ಪುತ್ತೂರು ತಾಲೂಕು ಬೆಳಂದೂರು ಗ್ರಾಮದ ಅಬ್ದುಲ್ ರಮೀಜ್ ಬಂಧಿತ ಆರೋಪಿಗಳು. ಬಂಧಿತರಿಂದ 5 ಲಕ್ಷ ರೂಪಾಯಿ ನಗದು, 45 ಗ್ರಾಂ ತೂಕದ ನಕಲಿ ಚಿನ್ನಾಭರಣ, 20 ಲಕ್ಷ ರೂ ಮೌಲ್ಯದ ಕಾರು, ಮೊಬೈಲ್ ಸೇರಿ 26.50 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರಿಫ್ ಅಬೂಬಕರ್ ಅಕ್ಟೋಬರ್ 9ರಂದು ಕಾವೂರು ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಅಸಲಿ ಚಿನ್ನಾಭರಣವೆಂದು ನಂಬಿಸಿ ನಕಲಿ ಚಿನ್ನಾಭರಣಗಳನ್ನು ಒತ್ತೆ ಇಟ್ಟು 6.24 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದ. ಚಿನ್ನದ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಆಭರಣಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ನಕಲಿ ಎನ್ನುವುದು ಗೊತ್ತಾಗಿದೆ. ನಂತರ ಕಾವೂರು ಠಾಣೆಗೆ ದೂರು ನೀಡಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಆರಿಫ್ ಹಾಗೂ ಆತನ ಸಹಚರರನ್ನು ಬಂಧಿಸಿದ್ದಾರೆ.