ಹಾಸನ: ಹಾಸನಾಂಬೆ ದರ್ಶನ ವಿದ್ಯುಕ್ತವಾಗಿ ಇಂದು ಮುಕ್ತಾಯವಾಗಿದ್ದು, ಈ ಬಾರಿ ದಾಖಲೆ ಪ್ರಮಾಣದಲ್ಲಿ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಇಂದು ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ 26.13 ಲಕ್ಷ ಜನರು ದರ್ಶನ ಪಡೆದಿದ್ದಾರೆ ಟಿಕೆಟ್ ಮತ್ತು ಲಾಡು ಪ್ರಸಾದ ಮಾರಾಟದಿಂದ 21.82 ಕೋಟಿ ಆದಾಯ ಬಂದಿದೆ ಎಂದರು.
ಹುಂಡಿ ಎಣಿಕೆ ನಂತರ ಒಟ್ಟಾರೆ 25 ಕೋಟಿ ಆದಾಯ ಬರುವ ಸಾಧ್ಯತೆ ಇದೆ. ಹುಂಡಿ ಎಣಿಕೆ ಕಾರ್ಯ ನಾಳೆ ನಡೆಯಲಿದೆ. ಕಳೆದ ವರ್ಷ 17.47 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದರು. ಟಿಕೆಟ್ ಮತ್ತು ಲಾಡು ಪ್ರಸಾದ ಮಾರಾಟದಿಂದ 9.68 ಕೋಟಿ ಆದಾಯ ಬಂದಿತ್ತು ಎಂದರು.
ಹಾಸನಾಂಬೆ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬರೋಬ್ಬರಿ 26 ಲಕ್ಷ ಜನ ದೇವಿಯ ದರ್ಶನ ಪಡೆದಿರುವುದು ಐತಿಹಾಸಿಕ ದಾಖಲೆ ಆಗಿದೆ. ಈ ಬಾರಿ ಹಾಸನಾಂಬೆ ದರ್ಶನ ಅತ್ಯಂತ ಯಶಸ್ವಿಯಾಗಿದ್ದು, ಇದಕ್ಕೆ ಸಹಕಾರ ನೀಡಿದ ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು, ಜಿಲ್ಲಾಡಳಿತದ ಎಲ್ಲಾ ಇಲಾಖೆಯ ಅಧಿಕಾರಿಗಳು, ಎನ್.ಸಿ.ಸಿ. ಹಾಗೂ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೂ ಸಹ ಧನ್ಯವಾದ ತಿಳಿಸಿದರು.
ಸ್ಥಳೀಯರಿಗೂ ಸಹ ಈ ಬಾರಿ ನಿನ್ನೆ ಸಂಜೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲಾ ಅತಿಥಿ ಗಣ್ಯರು ಸಹ ಈ ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡುವ ಮೂಲಕ ಜಿಲ್ಲಾಡಳಿತ ನಿಗದಿಪಡಿಸಿದ ಸಮಯಕ್ಕೆ ಆಗಮಿಸಿ ದರ್ಶನ ಪಡೆದಿದ್ದಾರೆ. ಕೆಲವು ಮಂತ್ರಿಗಳು ಸರತಿ ಸಾಲಿನಲ್ಲಿ ಬಂದು ದರ್ಶನ ಪಡೆದಿದ್ದಾರೆ ಎಂದರು.
ಕಂದಾಯ, ಪೊಲೀಸ್ ಸೇರಿ ಎಲ್ಲಾ ಇಲಾಖೆಯವರು ಶ್ರಮವಹಿಸಿ ಕೆಲಸ ಮಾಡಿದ್ದಾರೆ ಎಂದರಲ್ಲದೆ, ಈ ಸಲ ಜನಸಾಮಾನ್ಯರು ಸಂತೋಷದಿಂದ ದರ್ಶನ ಪಡೆದಿದ್ದಾರೆ. ನೂಕು ನುಗ್ಗಲು ಇಲ್ಲದೆ ಸರಳ, ಸುಲಲಿತವಾಗಿ ದರ್ಶನ ಆಗಿರುವುದು ಅತೀವ ಸಂತಸ ತಂದುಕೊಟ್ಟಿದೆ. ಇದರಿಂದ ಹಾಸನದ ಕೀರ್ತಿ ಪ್ರಜ್ವಲಿಸಿದೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿತ್ತು, ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ಜಿಲ್ಲೆಯ ಗೌರವ ವೃದ್ಧಿಸಿದೆ ಎಂದು ತಿಳಿಸಿದರಲ್ಲದೆ, ಶ್ರೀ ಸಾಮಾನ್ಯರು ದೇವಿ ದರ್ಶನ ಪಡೆದು ಸಂತೋಷ ಮತ್ತು ಸಂತೃಪ್ತ ಭಾವನೆಯಿಂದ ತೆರಳಿದ್ದಾರೆ ಎಂದು ತಿಳಿಸಿದರು.
ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಗಲಿರುಳು ಶ್ರಮವಹಿಸಿ ಕರ್ತವ್ಯ ನಿರ್ವಹಿಸಿದ್ದಾರೆ ಜೊತೆಗೆ ಶೇ.95 ರಷ್ಟು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ನೆಮ್ಮದಿಯಿಂದ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಮುಂದಿನ ವರ್ಷ ಅ.29 ರಂದು ಬಾಗಿಲು ತೆರೆದು ನ.11 ರಂದು ಬಾಗಿಲು ಮುಚ್ಚಲಾಗುವುದು ಎಂದು ತಿಳಿಸಿದರು.
ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಕಳೆದ ಬಾರಿ ಆಗಿದ್ದ ಅವ್ಯವಸ್ಥೆ ಸರಿಪಡಿಸಿದ್ದು, ಈ ಬಾರಿ ಅತ್ಯಂತ ಯಶಸ್ವಿಯಾಗಿ ಜಾತ್ರಾ ಮಹೋತ್ಸವ ನಡೆದಿದೆ. ಉತ್ತಮ ಆದಾಯ ಬಂದಿದೆ. ಎಲ್ಲರೂ ಸಹಕಾರ ನೀಡಿದ್ದಾರೆ. ಹಾಸನಾಂಬ ದೇವಿ ದರ್ಶನ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಯಶಸ್ಸಿಗೆ ಸಹಕರಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನರ ಪರವಾಗಿ ಸಚಿವರಿಗೆ ಧನ್ಯವಾದ ಹೇಳಿದರು.
ಸಂಸದರಾದ ಶ್ರೇಯಸ್ ಎಂ. ಪಟೇಲ್, ಶಾಸಕರಾದ ಸ್ವರೂಪ್ ಪ್ರಕಾಶ್, ಸಿಮೆಂಟ್ ಮಂಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ, ಮಹಾನಗರಪಾಲಿಕೆ ಮೇಯರ್ ಗಿರೀಶ್ ಚೆನ್ನವೀರಪ್ಪ, ಉಪ ಮೇಯರ್ ಹೇಮಾಲತಾ, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಉಪ ವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಮಾರುತಿ ಮತ್ತಿತರರು ಹಾಜರಿದ್ದರು.