ವಾಷಿಂಗ್ಟನ್: ಕಾಫಿ ಚೈನ್ ಸ್ಟಾರ್‌ಬಕ್ಸ್ ಇದೀಗ ವಿಭಿನ್ನವಾದ ಉದ್ಯೋಗವೊಂದಕ್ಕೆ ನೇಮಕಾತಿ ನಡೆಸುತ್ತಿದೆ. ಇಲ್ಲಿ ಲ್ಯಾಟೆ, ಫ್ರೆಶ್ ಬ್ರೂ ಮಾಡಬೇಕಿಲ್ಲ, ಬದಲಾಗಿ ವಿಮಾನ ಹಾರಿಸಬೇಕು! ಈ ಹುದ್ದೆಗೆ ವರ್ಷಕ್ಕೆ 3.08 ಕೋಟಿ ರೂಪಾಯಿ (360,000 ಡಾಲರ್‌ಗೂ ಹೆಚ್ಚು) ಸಂಬಳವಿದ್ದು, ಅಪಾರ ವಿಮಾನ ಹಾರಾಟದ ಅನುಭವವನ್ನು ಕೇಳಲಾಗಿದೆ.
ಸ್ಟಾರ್‌ಬಕ್ಸ್ ತನ್ನ ಕಂಪನಿಯ ವಿಮಾನವನ್ನು ಹಾರಿಸಲು ಪೈಲಟ್ ಅನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಈ ಪೈಲಟ್ ದೇಶ ಮತ್ತು ವಿದೇಶಗಳಲ್ಲಿ ಸ್ಟಾರ್‌ಬಕ್ಸ್‌ನ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಬೇಕಾಗುತ್ತದೆ.
ಅಧಿಕಾರಿಯ ಕೆಲಸದ ವಿವರ
ಸ್ಟಾರ್‌ಬಕ್ಸ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಹುದ್ದೆಯ ವಿವರಗಳ ಪ್ರಕಾರ, ಕಂಪನಿಯ ವಿಮಾನಕ್ಕೆ ‘ಕ್ಯಾಪ್ಟನ್-ಪೈಲಟ್-ಇನ್-ಕಮಾಂಡ್’ ಆಗಿ ಕೆಲಸ ಮಾಡಲು ಅರ್ಹತೆಗಳನ್ನು ನಮೂದಿಸಿದೆ. ಆಯ್ಕೆಯಾಗುವ ಅಭ್ಯರ್ಥಿಯು ನಿಯೋಜಿತ ವಿಮಾನ ಮತ್ತು ಸಿಬ್ಬಂದಿಯನ್ನು ನಿರ್ವಹಿಸಬೇಕು, ಪೂರ್ವ-ಹಾರಾಟದ ಯೋಜನೆಗಳನ್ನು ನಿರ್ದೇಶಿಸಬೇಕು ಮತ್ತು ಸಾಧ್ಯವಾದಷ್ಟು ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.
ಸಿಇಒ ಆಗಿರಬಹುದು ಪ್ರಮುಖ ಪ್ರಯಾಣಿಕ!
“ಉನ್ನತ ಗ್ರಾಹಕ ಸೇವಾ ಕೌಶಲ್ಯಗಳು ಮತ್ತು ಉನ್ನತ ಮಟ್ಟದ ವೃತ್ತಿಪರತೆ” ಯನ್ನು ಹುದ್ದೆಯ ಅವಶ್ಯಕತೆಗಳಲ್ಲಿ ಒಂದಾಗಿ ಉಲ್ಲೇಖಿಸಲಾಗಿದೆ. ಏಕೆಂದರೆ ಈ ಸ್ಥಾನವು ಸ್ಟಾರ್‌ಬಕ್ಸ್‌ನ ಉನ್ನತ ಕಾರ್ಯನಿರ್ವಾಹಕ ಮಟ್ಟದ ಅಧಿಕಾರಿಗಳೊಂದಿಗೆ ನಿರಂತರವಾಗಿ ವ್ಯವಹರಿಸುತ್ತದೆ. ಸ್ಟಾರ್‌ಬಕ್ಸ್ ಸಿಇಒ ಬ್ರಿಯಾನ್ ನಿಕೋಲ್ ಅವರು ಕ್ಯಾಲಿಫೋರ್ನಿಯಾದಲ್ಲಿರುವ ತಮ್ಮ ಮನೆಯಿಂದ ಸಿಯಾಟಲ್‌ನಲ್ಲಿರುವ ಸ್ಟಾರ್‌ಬಕ್ಸ್ ಪ್ರಧಾನ ಕಚೇರಿಗೆ ವಾರದಲ್ಲಿ ಹಲವು ದಿನ 1,000 ಮೈಲಿಗೂ ಹೆಚ್ಚು ದೂರ ಪ್ರಯಾಣಿಸುತ್ತಾರೆ. ಹಾಗಾಗಿ, ವಿಮಾನದಲ್ಲಿ ಆಗಾಗ್ಗೆ ಪ್ರಯಾಣಿಸುವವರಲ್ಲಿ ಅವರೂ ಒಬ್ಬರಾಗಿರಬಹುದು. “ಪ್ರಯಾಣಿಕರ ಸಾಮಾನುಗಳನ್ನು ನಿರ್ವಹಿಸಲು ಸಹಾಯ ಮಾಡುವುದು” ಕೂಡ ಈ ಕೆಲಸದ ಭಾಗವಾಗಿದೆ.
ಅವಶ್ಯಕತೆಗಳೇನು?
ಈ ಹುದ್ದೆಗೆ ಕಟ್ಟುನಿಟ್ಟಾದ ವಿಮಾನ ಹಾರಾಟದ ಹಿನ್ನೆಲೆ ಕೇಳಲಾಗಿದೆ. ಕಾರ್ಪೊರೇಟ್ ಫ್ಲೈಟ್ ಡಿಪಾರ್ಟ್ಮೆಂಟ್‌ನಲ್ಲಿ ಕ್ಯಾಪ್ಟನ್ ಆಗಿ 5 ವರ್ಷಗಳಿಗಿಂತ ಹೆಚ್ಚು ಅನುಭವ ಮತ್ತು ಒಟ್ಟು 5,000 ಗಂಟೆಗಳ ಹಾರಾಟದ ಸಮಯ ಕಡ್ಡಾಯವಾಗಿದೆ. ಇನ್ನುಳಿದಂತೆ ಏರ್‌ಲೈನ್ ಟ್ರಾನ್ಸ್‌ಪೋರ್ಟ್ ಪೈಲಟ್ ಪ್ರಮಾಣಪತ್ರ, ಪ್ರಥಮ ದರ್ಜೆ ವೈದ್ಯಕೀಯ ಪ್ರಮಾಣಪತ್ರ, ಮಾನ್ಯವಾದ ಪಾಸ್‌ಪೋರ್ಟ್ ಮತ್ತು ಎಫ್‌ಸಿಸಿ-ನಿರ್ಬಂಧಿತ ರೇಡಿಯೋ ಆಪರೇಟರ್ ಪರವಾನಗಿ ಹೊಂದಿರಬೇಕು.
ಈ ಹುದ್ದೆಗೆ ನೀಡುವ ಸಂಬಳವು ಸಾಮಾನ್ಯವಾಗಿ ಸ್ಟಾರ್‌ಬಕ್ಸ್ ಬರಿಸ್ತಾ ವರ್ಷಕ್ಕೆ ಪಡೆಯುವ ಸಂಬಳಕ್ಕಿಂತ 10 ಪಟ್ಟು ಹೆಚ್ಚಾಗಿದೆ. ಅರ್ಜಿದಾರರು “ಸ್ಟಾರ್‌ಬಕ್ಸ್ ಕಾಫಿ ಕಂಪನಿಯನ್ನು ಸಕಾರಾತ್ಮಕವಾಗಿ ಪ್ರತಿಬಿಂಬಿಸುವ” ಚಿತ್ರಣವನ್ನು ಹೊಂದಿರಬೇಕು, ಇದರಲ್ಲಿ “ಸೌಜನ್ಯ ಮತ್ತು ಸಭ್ಯತೆ” ಸೇರಿವೆ. “ಸ್ಟಾರ್‌ಬಕ್ಸ್ ಕ್ಯಾಪ್ಟನ್ – ಪೈಲಟ್-ಇನ್-ಕಮಾಂಡ್ ಆಗಿ, ನೀವು ಸ್ಟಾರ್‌ಬಕ್ಸ್ ಕಾಫಿ ಕಂಪನಿಯ ಬ್ರ್ಯಾಂಡ್ ಮತ್ತು ಜಗತ್ತಿನಾದ್ಯಂತದ ಉದ್ಯೋಗಿಗಳ ಹೆಮ್ಮೆ ಮತ್ತು ವೃತ್ತಿಪರತೆಯನ್ನು ಪ್ರತಿನಿಧಿಸುತ್ತೀರಿ. ಕ್ಯಾಪ್ಟನ್ ಪ್ರಯಾಣಿಕರಿಗೆ ಕಂಪನಿಯ ಅತಿ ಹೆಚ್ಚು ಗೋಚರಿಸುವ ಪ್ರತಿನಿಧಿಗಳಲ್ಲಿ ಒಬ್ಬರಾಗಿರುತ್ತಾರೆ,” ಎಂದು ಜಾಹೀರಾತು ತಿಳಿಸಿದೆ.