ಈ ಬಾರಿ ರಾಜ್ಯಕ್ಕೆ ಕಳೆದ 122 ವರ್ಷಗಳಲ್ಲೇ ಭೀಕರ ಬರ : ಸಚಿವ ದಿನೇಶ್ ಗುಂಡೂರಾವ್‌

ಬೆಂಗಳೂರು :   ಹವಾಮಾನ ಇಲಾಖೆಯ ದತ್ತಾಂಶಗಳ ಪ್ರಕಾರ ಈ ಬಾರಿ ರಾಜ್ಯಕ್ಕೆ ತಲೆದೋರಿರುವ ಬರ ಕಳೆದ 122 ವರ್ಷಗಳಲ್ಲೇ ಭೀಕರ ಬರ ಎಂದಿದೆ. ರಾಜ್ಯದ 223 ತಾಲ್ಲೂಕುಗಳು ಈ ಬಾರಿ ತೀವ್ರ ಬರದಿಂದ ನರಳುತ್ತಿವೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿರುವ ನಮ್ಮ ಸರ್ಕಾರ ಮೊದಲ ಕಂತಿನಲ್ಲಿ ತಲಾ 2 ಸಾವಿರ ಪರಿಹಾರ ಕೊಡುತ್ತಿದೆ. ಇಲ್ಲಿಯವರೆಗೂ 33 ಲಕ್ಷ ರೈತರಿಗೆ 628 ಕೋಟಿ ಪರಿಹಾರ ನೀಡಿದ್ದೇವೆ‌.  ಇದು ನಮ್ಮ ಸರ್ಕಾರಕ್ಕೆ ರೈತರ ಮೇಲಿರುವ ಕಾಳಜಿ ಮತ್ತು ಬದ್ಧತೆ. ಬರಪರಿಹಾರದಲ್ಲಿ ಕೇಂದ್ರದ ಕೊಡುಗೆ ಏನು ಎಂದು ಹೇಳುವ ತಾಕತ್ತು ರಾಜ್ಯ BJP ನಾಯಕರಿಗಿದೆಯೇ.? ಎಂದು ಪ್ರಶ್ನಿಸಿದ್ದಾರೆ.

NDRF ಅಡಿ ಬರ ಪರಿಹಾರ ನೀಡುವ ಉನ್ನತಾಧಿಕಾರ  ಸಮಿತಿಗೆ ಕೇಂದ್ರ ಗೃಹ ಸಚಿವರೆ ಅಧ್ಯಕ್ಷರು. ಅಮಿಶ್ ಶಾ ನಿನ್ನೆಯಷ್ಟೇ ಮೈಸೂರಿಗೆ ಬಂದಿದ್ದರು‌. ಈ ವೇಳೆ ಅವರ ಬಾಯಿಂದ ನಮ್ಮ ರಾಜ್ಯಕ್ಕೆ ಬರ ಪರಿಹಾರ ನೀಡುವ ಬಗ್ಗೆ ಒಂದಾದರೂ ಮಾತು ಬಂತೆ.? ಅಮಿತ್ ಶಾ ಎದುರು ಜೀ ಹುಜೂರ್ ಎಂದು ನಡು ಬಗ್ಗಿಸಿ ನಿಂತಿದ್ದ ರಾಜ್ಯ BJP ನಾಯಕರಲ್ಲಿ ಒಬ್ಬರಾದರೂ ಬರ ಪರಿಹಾರ ನೀಡುವಂತೆ ಶಾ ಅವರ ಬಳಿ ಕೇಳಿಕೊಂಡರೆ.? ನಮ್ಮ ಎದುರು ಕಡಿ,ಕೊಚ್ಚು, ಗುಂಡಿಟ್ಟು ಕೊಲ್ಲು ಎಂದು ಪ್ರತಾಪ ತೋರಿಸುವ ರಾಜ್ಯ BJP ನಾಯಕರು ಈ ಪೌರುಷವನ್ನು ರಾಜ್ಯದ ರೈತರ ಹಿತಕ್ಕಾಗಿ ಅಮಿತ್ ಶಾ ಎದುರು ತೋರಿಸಬೇಕಿತ್ತಲ್ಲವೆ.? ಎಂದು ಕಿಡಿಕಾರಿದ್ದಾರೆ.

ಮೈಸೂರಿಗೆ ಬಂದಿದ್ದ ಅಮಿತ್ ಶಾ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ತಮ್ಮ ಹೊಟ್ಟೆಯೊಳಗಿದ್ದ ವಿಷವನ್ನು ಕಕ್ಕಿದ್ದಾರೆ. ಬಡವರಿಗೆ ಆರ್ಥಿಕ ಸ್ವಾತಂತ್ರ್ಯ ಹಾಗೂ ಎರಡೊತ್ತಿನ ಅನ್ನ ನೀಡುವ ಗ್ಯಾರಂಟಿ ಯೋಜನೆಗಳ ಬಗ್ಗೆ BJPಯವರಿಗೆ ಯಾವ ಮನಃಸ್ಥಿತಿಯಿದೆ ಎಂಬುದು ಅವರ ಮಾತಿನಿಂದಲೇ ತಿಳಿಯುತ್ತದೆ. ಬಡವರಿಗೆ ಅನ್ನ ಕೊಡುವುದಕ್ಕೇ ಇಷ್ಟು ವಿಷ ಕಾರುವವರು, ಬರದಿಂದ ತತ್ತರಿಸುವ ರಾಜ್ಯದ ರೈತರ ನೆರವಿಗೆ ಧಾವಿಸಲು ಸಾಧ್ಯವೇ.? ಕೇಂದ್ರದ ಬರ ಪರಿಹಾರ ಎನ್ನುವುದು ಕನ್ನಡಿಗರ ಪಾಲಿಗೆ ಮಾಯಾಜಿಂಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read