ಬೆಂಗಳೂರು: ಸರ್ಕಾರದ ಮಟ್ಟದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡರೆ ಅಧಿಕಾರಿ ವರ್ಗದಿಂದ ಪಾರದರ್ಶಕತೆಯನ್ನು, ದಕ್ಷತೆಯನ್ನು ನಿರೀಕ್ಷಿಸುವ ನೈತಿಕತೆಯನ್ನು ಹೊಂದಿರುತ್ತೇವೆ ಎಂಬುದು ನನ್ನ ನಂಬಿಕೆ. ಮೊಟ್ಟ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ನ್ಯಾಯಯುತವಾಗಿ, ಪಾರದರ್ಶಕವಾಗಿ ಮತ್ತು ಭ್ರಷ್ಟಾಚಾರ ಮುಕ್ತವಾಗಿ ನಡೆಯುವ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಸಾಂಕೇತಿಕವಾಗಿ ಅರ್ಹ ಪಿಡಿಓಗಳಿಗೆ ವರ್ಗಾವಣೆ ಪತ್ರವನ್ನು ಹಸ್ತಾಂತರಿಸಿದ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಯಾವುದೇ ಲಾಬಿಗೆ ಅವಕಾಶ ಕೊಡದಂತೆ, ಕೇವಲ ಅರ್ಹತೆಯೊಂದನ್ನೇ ಮಾನದಂಡವಾಗಿರುವ ಈ ವರ್ಗಾವಣೆ ಪ್ರಕ್ರಿಯೆಯು ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಮಾದರಿ ಹೆಜ್ಜೆಯಾಗಿದೆ. ಈಗಾಗಲೇ ಕೌನ್ಸಿಲಿಂಗ್ ಮೂಲಕ ಪಂಚಾಯತ್ ಕಾರ್ಯದರ್ಶಿ ಗ್ರೇಡ್ 1, ಗ್ರೇಡ್ 2 ಹಾಗೂ ದ್ವಿತೀಯ ದರ್ಜೆ ಸಹಾಯಕರ ವರ್ಗಾವಣೆಯನ್ನು ಯಶಸ್ವಿಯಾಗಿ ಪೂರೈಸಿಲಾಗಿದೆ.
ಈಗ 5 ವರ್ಷಕ್ಕಿಂತ ಮೇಲ್ಪಟ್ಟು ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸಿದ ಪಿಡಿಓಗಳಿಗೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡುವ ಈ ಪ್ರಕ್ರಿಯೆಯು ಸೆಪ್ಟೆಂಬರ್ 8ನೇ ತಾರೀಖಿನವರೆಗೆ ವಿಶೇಷ ಪ್ರಕರಣಗಳು ಹಾಗೂ ಸೆಪ್ಟೆಂಬರ್ 10ರಿಂದ 20ನೇ ತಾರೀಖಿನವರೆಗೂ ಕಡ್ಡಾಯ ವರ್ಗಾವಣೆ ಹಾಗೂ ಸೆಪ್ಟೆಂಬರ್ 23, 24ನೇ ತಾರೀಖಿನಂದು ಸಾಮಾನ್ಯ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆಗಳು ನಡೆಯುತ್ತವೆ.
ಆನ್ಲೈನ್ ಮೂಲಕ ವಿಶೇಷ ಪ್ರಕರಣಗಳ ಅಡಿಯಲ್ಲಿ 515 ಅರ್ಜಿಗಳು,ಸಾಮಾನ್ಯ ಕೋರಿಕೆ ಅಡಿಯಲ್ಲಿ 1215 ಅರ್ಜಿಗಳು ಸೇರಿದಂತೆ ಒಟ್ಟು 1730 ಅರ್ಜಿಗಳು ಸ್ವೀಕೃತಗೊಂಡಿವೆ.ಇದೇ ಮೊದಲ ಬಾರಿಗೆ ನಡೆಯುತ್ತಿರುವ ಪಿಡಿಒ ವರ್ಗಾವಣೆ ಪ್ರಕ್ರಿಯೆಯು ಆನ್ ಲೈನ್ ಕೌನ್ಸಿಲಿಂಗ್ ಮೂಲಕ ನಡೆಸುತ್ತಿದ್ದು ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಜೊತೆಗೆ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರಿಯಾಗುತ್ತದೆ ಎಂದು ಸಚಿವ ಖರ್ಗೆ ತಿಳಿಸಿದ್ದಾರೆ.