ಭಾರತೀಯ ರೈಲ್ವೆ ವಿಶ್ವದ ಅತಿ ದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದ್ದು, ದೇಶಾದ್ಯಂತ 7,461 ರೈಲು ನಿಲ್ದಾಣಗಳನ್ನು ನಿರ್ವಹಿಸುತ್ತದೆ. ಉತ್ತರ ಪ್ರದೇಶವು 1,173 ರೈಲು ನಿಲ್ದಾಣಗಳನ್ನು ಹೊಂದಿದ್ದು, ಭಾರತದಲ್ಲಿಯೇ ಅತಿ ಹೆಚ್ಚು ರೈಲು ನಿಲ್ದಾಣಗಳನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (689), ಬಿಹಾರ (768), ಮಧ್ಯಪ್ರದೇಶ (550) ಮತ್ತು ಗುಜರಾತ್ (509) ರಾಜ್ಯಗಳಿವೆ. ಆದರೆ, ಕೇವಲ ಒಂದೇ ಒಂದು ರೈಲು ನಿಲ್ದಾಣವನ್ನು ಹೊಂದಿರುವ ಭಾರತದ ರಾಜ್ಯವಿದೆ ಎಂದು ನಿಮಗೆ ತಿಳಿದಿದೆಯೇ?
ಹೌದು, ನಾವು ಮಾತನಾಡುತ್ತಿರುವುದು ಈಶಾನ್ಯ ಭಾರತದ ಪುಟ್ಟ ರಾಜ್ಯವಾದ ಮಿಜೋರಾಂ ಬಗ್ಗೆ. ಭಾರತದ ಗಡಿಯ ಕೊನೆಯಲ್ಲಿರುವ ಈ ರಾಜ್ಯದಲ್ಲಿ ಕೇವಲ ಒಂದೇ ಒಂದು ರೈಲು ನಿಲ್ದಾಣವಿದೆ.
ಮಿಜೋರಾಂನ ಕೊಲಾಸಿಬ್ ಜಿಲ್ಲೆಯಲ್ಲಿರುವ ಬೈರಬಿ ರೈಲು ನಿಲ್ದಾಣವು ಮೂರು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದು, ರಾಜ್ಯದ 1.25 ಮಿಲಿಯನ್ (12.25 ಲಕ್ಷ) ಜನಸಂಖ್ಯೆಗೆ ಸೇವೆ ಸಲ್ಲಿಸುತ್ತದೆ. ಬೈರಬಿ ರೈಲು ನಿಲ್ದಾಣವು ಮಿಜೋರಾಂನ ರೈಲು ಮಾರ್ಗಗಳಲ್ಲಿ ಒಂದಾಗಿದ್ದು, 84.25 ಕಿ.ಮೀ ಉದ್ದದ ಬ್ರಾಡ್‌ಗೇಜ್ ರೈಲು ಮಾರ್ಗದಿಂದ ಕಟಕಾಲ್ ಜಂಕ್ಷನ್‌ನಿಂದ ಬೈರಬಿಗೆ ಸಂಪರ್ಕ ಹೊಂದಿದೆ. ಈ ಮಾರ್ಗವು ಮಾರ್ಚ್ 2016 ರಲ್ಲಿ ಪೂರ್ಣಗೊಂಡಿತು. ಈ ಸಣ್ಣ ನಿಲ್ದಾಣವು ನಾಲ್ಕು ರೈಲು ಹಳಿಗಳನ್ನು ಹೊಂದಿದ್ದು, 2016 ರಲ್ಲಿ ಆಧುನಿಕ ಸೌಲಭ್ಯಗಳನ್ನು ಸೇರಿಸುವ ಮೂಲಕ ನವೀಕರಿಸಲಾಯಿತು. ಈ ರೈಲು ನಿಲ್ದಾಣವು ಮಿಜೋರಾಂ ರಾಜಧಾನಿ ಐಜ್ವಾಲ್‌ನಿಂದ 90 ಕಿ.ಮೀ ದೂರದಲ್ಲಿದೆ.
ಬೈರಬಿ-ಸೈರಂಗ್ ರೈಲು ಮಾರ್ಗ ಯೋಜನೆ
ಭಾರತೀಯ ರೈಲ್ವೆಯು ಬೈರಬಿಯಿಂದ ಸೈರಂಗ್‌ಗೆ ಹೊಸ ರೈಲು ಮಾರ್ಗವನ್ನು ನಿರ್ಮಿಸಲು ಯೋಜಿಸಿದೆ. ಇದರ ಉದ್ದೇಶ ಐಜ್ವಾಲ್ ಅನ್ನು ರಾಷ್ಟ್ರೀಯ ರೈಲ್ವೆ ಜಾಲದೊಂದಿಗೆ ಸಂಪರ್ಕಿಸುವುದು. ಆದಾಗ್ಯೂ, ಮಿಜೋರಾಂನ ಗುಡ್ಡಗಾಡು ಪ್ರದೇಶವು ರೈಲ್ವೆ ನಿರ್ಮಾಣವನ್ನು ಸವಾಲಿನ ಕಾರ್ಯವನ್ನಾಗಿಸುತ್ತದೆ, ಆದ್ದರಿಂದ ಈ ದೂರದ ರಾಜ್ಯದಲ್ಲಿ ರೈಲು ಸಂಪರ್ಕವು ಸೀಮಿತವಾಗಿದೆ. ಬೈರಬಿ ನಿಲ್ದಾಣದಿಂದ ಐಜ್ವಾಲ್ ಬಳಿಯ ಸೈರಂಗ್ ರೈಲು ನಿಲ್ದಾಣದವರೆಗೆ 51 ಕಿ.ಮೀ ಉದ್ದದ ರೈಲು ಮಾರ್ಗವನ್ನು ಸುಮಾರು 2,384 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಮಿಜೋರಾಂ ಭಾರತದಲ್ಲಿ ಒಂದೇ ರೈಲು ನಿಲ್ದಾಣವನ್ನು ಹೊಂದಿರುವ ಏಕೈಕ ರಾಜ್ಯವಾಗಿದೆ.