ಇಂದು ಭಾರತದ ʼಸಿಲಿಕಾನ್ ವ್ಯಾಲಿʼ ಎಂದೇ ಖ್ಯಾತಿ ಪಡೆದಿರುವ ನಮ್ಮ ಬೆಂಗಳೂರು, ಒಂದು ಕಾಲದಲ್ಲಿ ಕತ್ತಲೆಯ ಸಾಮ್ರಾಜ್ಯವಾಗಿತ್ತು. ಬೀದಿಗಳಲ್ಲಿ ಬೆಳಕಿಗಾಗಿ ಸೀಮೆಎಣ್ಣೆ ದೀಪಗಳನ್ನೇ ನೆಚ್ಚಿಕೊಳ್ಳಲಾಗಿತ್ತು. ಆದರೆ, 1905ರ ಆಗಸ್ಟ್ 5ರಂದು ಸಂಜೆ ನಡೆದ ಒಂದು ಐತಿಹಾಸಿಕ ಘಟನೆ ಬೆಂಗಳೂರಿನ ಚಿತ್ರಣವನ್ನೇ ಬದಲಿಸಿತು. ಅಂದು ಕೆ.ಆರ್. ಮಾರುಕಟ್ಟೆಯಲ್ಲಿ ನೆರೆದಿದ್ದ ಜನಸ್ತೋಮಕ್ಕೆ ಅರಿವಿರಲಿಲ್ಲ, ಅವರು ಏಷ್ಯಾದಲ್ಲೇ ಮೊದಲ ಬಾರಿಗೆ ವಿದ್ಯುತ್ ದೀಪಗಳು ಬೆಳಗುವುದನ್ನು ಕಣ್ತುಂಬಿಕೊಳ್ಳಲಿದ್ದಾರೆಂದು !
ಹೌದು, ಆ ದಿನ ಬೆಂಗಳೂರು ಏಷ್ಯಾದಲ್ಲೇ ವಿದ್ಯುತ್ ಬೀದಿ ದೀಪಗಳನ್ನು ಅಳವಡಿಸಿದ ಪ್ರಥಮ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಶಿವನಸಮುದ್ರದ ಕಾವೇರಿ ಜಲಪಾತದಿಂದ ಉತ್ಪತ್ತಿಯಾಗುತ್ತಿದ್ದ ಜಲವಿದ್ಯುತ್ ಈ ಕ್ರಾಂತಿಗೆ ನಾಂದಿ ಹಾಡಿತು. ಮೊದಲು ಕೋಲಾರ ಚಿನ್ನದ ಗಣಿಗಳಿಗೆ ವಿದ್ಯುತ್ ಪೂರೈಸಲಾಗುತ್ತಿತ್ತು. ಬಳಿಕ ಹೆಚ್ಚುವರಿ ವಿದ್ಯುತ್ ಬೆಂಗಳೂರಿಗೆ ಹರಿಯಿತು.
ಮೇಜರ್ ಎಸಿಜೆ ಡಿ ಲೊಟ್ಬಿನಿಯರ್ ಅವರ ಕನಸಿನ ಕೂಸು ಈ ಯೋಜನೆ. ಮೈಸೂರಿನ ದಿವಾನ ಶೇಷಾದ್ರಿ ಅಯ್ಯರ್ ಅವರ ಬೆಂಬಲ ಮತ್ತು ಮುಖ್ಯ ವಿದ್ಯುತ್ ಇಂಜಿನಿಯರ್ ಹ್ಯಾರಿ ಪಾರ್ಕರ್ ಗಿಬ್ಸ್ ಅವರ ನೇತೃತ್ವದಲ್ಲಿ ಇದು ಕಾರ್ಯರೂಪಕ್ಕೆ ಬಂದಿತು. ಕೆಜಿಎಫ್‌ನ ಗಣಿಗಾರಿಕೆ ನಿರ್ವಹಿಸುತ್ತಿದ್ದ ಬ್ರಿಟಿಷ್ ಕಂಪನಿ ಜಾನ್ ಟೇಲರ್ & ಸನ್ಸ್ ಕೂಡ ಈ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿತ್ತು.
ಶಿವನಸಮುದ್ರದಿಂದ ಸುಮಾರು 150 ಕಿ.ಮೀ ದೂರದವರೆಗೆ ವಿದ್ಯುತ್ ತಂತಿಗಳು ಹರಡಿಕೊಂಡಿದ್ದವು. 1905ರಲ್ಲಿ ಸುಮಾರು 2000 ಅಶ್ವಶಕ್ತಿಯ ಹೆಚ್ಚುವರಿ ವಿದ್ಯುತ್ ಲಭ್ಯವಾದಾಗ, ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅದನ್ನು ಬೆಂಗಳೂರಿನ ಸಾರ್ವಜನಿಕರಿಗಾಗಿ ಬಳಸಲು ನಿರ್ಧರಿಸಿದರು.
ಹಳೆಯ ಬೆಂಗಳೂರು ಮತ್ತು ಬ್ರಿಟಿಷರ ಆಡಳಿತದಲ್ಲಿದ್ದ ಕಂಟೋನ್ಮೆಂಟ್ ಪ್ರದೇಶಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತಿತ್ತು. ವಿದ್ಯುದ್ದೀಕರಣ ಯೋಜನೆಗಳು ಭಾರತೀಯ ವಿದ್ಯುತ್ ಕಾಯ್ದೆಗೆ ಅನುಗುಣವಾಗಿರಬೇಕಿತ್ತು. ಮೊದಲ ವಿದ್ಯುತ್ ಉಪಕೇಂದ್ರ ಕೆ.ಆರ್. ಮಾರುಕಟ್ಟೆಯಲ್ಲಿ ಸ್ಥಾಪನೆಯಾಯಿತು. ಸರ್ ಜಾನ್ ಹ್ಯೂಯೆಟ್ ಅವರು ಈ ಯೋಜನೆಯನ್ನು ಉದ್ಘಾಟಿಸಿದರು.
ಆರಂಭದಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಎತ್ತರದ ಕಬ್ಬಿಣದ ಕಂಬಗಳ ಮೇಲೆ ನಾಲ್ಕರ ಗುಂಪುಗಳಲ್ಲಿ 800ಕ್ಕೂ ಹೆಚ್ಚು ವಿದ್ಯುತ್ ದೀಪಗಳನ್ನು ಅಳವಡಿಸಲಾಯಿತು. ನಂತರ ಕೆ.ಆರ್. ಮಾರುಕಟ್ಟೆಯ ಉಪಕೇಂದ್ರವನ್ನು ಆನಂದ ರಾವ್ ವೃತ್ತಕ್ಕೆ ಸ್ಥಳಾಂತರಿಸಲಾಯಿತು. ಎಂ.ಜಿ. ರಸ್ತೆ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಹೊಸ ಉಪಕೇಂದ್ರಗಳು ತಲೆ ಎತ್ತಿದವು. ಎಂ.ಜಿ. ರಸ್ತೆಯ ಉಪಕೇಂದ್ರದಿಂದಲೇ ಈಸ್ಟ್ ಪರೇಡ್ ಚರ್ಚ್‌ಗೆ ಬೆಳಕು ಬರುತ್ತಿತ್ತು ಎನ್ನಲಾಗಿದೆ.
ಈ ಸಂಪೂರ್ಣ ವಿದ್ಯುದ್ದೀಕರಣ ಯೋಜನೆಗೆ ಸುಮಾರು 6 ಲಕ್ಷ ರೂಪಾಯಿ ಖರ್ಚಾಗಿತ್ತು ಮತ್ತು ವಾರ್ಷಿಕ ನಿರ್ವಹಣಾ ವೆಚ್ಚ 50,000 ರೂಪಾಯಿ. ಕೇವಲ ಒಂದು ವರ್ಷದಲ್ಲಿ ನಗರದಲ್ಲಿ 1630 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಪ್ರತಿ ಬಲ್ಬ್‌ಗೆ ತಿಂಗಳಿಗೆ ಒಂದು ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು. ಈ ಯೋಜನೆಯಿಂದ ವಾರ್ಷಿಕ ಒಂದು ಲಕ್ಷ ರೂಪಾಯಿ ಆದಾಯ ಬರುತ್ತಿತ್ತು.
ಕಾಲಾನಂತರದಲ್ಲಿ ಆಕರ್ಷಕ ಕಬ್ಬಿಣದ ದೀಪದ ಕಂಬಗಳನ್ನು ತೆಗೆದುಹಾಕಲಾಯಿತಾದರೂ, ಅವುಗಳಲ್ಲಿ ಎರಡನ್ನು ಸಂರಕ್ಷಿಸಿ ಬಿಬಿಎಂಪಿ ಕಚೇರಿ ಆವರಣದಲ್ಲಿ ಇರಿಸಲಾಗಿದೆ. ಇದು ಬೆಂಗಳೂರಿನ ಆಧುನಿಕತೆಯೆಡೆಗಿನ ಬೆಳಗಿನ ಹೆಜ್ಜೆಯ ನೆನಪಾಗಿ ಶಾಶ್ವತವಾಗಿ ಉಳಿದಿದೆ.