ತುಮಕೂರು: ಅವರು ಆರ್.ಎಸ್.ಎಸ್. ಗೀತೆ ಹಾಡಬಹುದು, ಖಾಸಗಿ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳಬಹುದು. ಏನು ಬೇಕಾದರೂ ಮಾತನಾಡಬಹುದು, ನಾವು ಏನೂ ಮಾತನಾಡುವಂತಿಲ್ಲ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಡಿ.ಕೆ. ಶಿವಕುಮಾರ್ ವಿಧಾನಸಭೆ ಅಧಿವೇಶನದಲ್ಲಿ ಆರ್.ಎಸ್.ಎಸ್. ಗೀತೆ ಹಾಡಿರುವ ಕುರಿತಾಗಿ ಪ್ರತಿಕ್ರಿಯೆ ನೀಡಿ, ಅವರು ಆರ್.ಎಸ್.ಎಸ್. ಗೀತೆ ಹಾಡಬಹುದು, ಅಮಿತ್ ಶಾ ಜೊತೆಗೆ ವೇದಿಕೆ ಹಂಚಿಕೊಳ್ಳಬಹುದು. ಏನು ಬೇಕಾದರೂ ಮಾತನಾಡಬಹುದು. ಆದರೆ ನಾವು ಮಾತನಾಡುವಂತಿಲ್ಲ ಎಂದು ಹೇಳಿದ್ದಾರೆ.
ಪ್ರಯಾಗ್ ರಾಜ್ ನ ಗಂಗೆಯಲ್ಲಿ ಸ್ನಾನ ಮಾಡಿದ ಮಾತ್ರಕ್ಕೆ ಬಡತನ ನಿವಾರಣೆಯಾಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಇದಾದ ನಂತರ ಡಿ.ಕೆ. ಶಿವಕುಮಾರ್ ಅಲ್ಲಿಗೆ ಹೋಗಿ ಪುಣ್ಯ ಸ್ನಾನ ಮಾಡಿದರು. ಅಂಬಾನಿ ಮಗನ ಮದುವೆಯ ಆಮಂತ್ರಣವನ್ನು ಸ್ವೀಕರಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಅಂತಹ ಮದುವೆಗೆ ಕುಟುಂಬ ಸಮೇತರಾಗಿ ಡಿಕೆಶಿ ಹೋಗಿದ್ದರು ಎಂದು ರಾಜಣ್ಣ ಕಿಡಿಕಾರಿದ್ದಾರೆ. ನಾವು ಯಾವುದೇ ಶಾಸಕರು, ಮಂತ್ರಿಗಳ ಸಭೆ ಕರೆಯುವಂತಿಗಿಲ್ಲ. ಬೇರೆಯವರು ಕರೆಯಬಹುದು, ಮಾತನಾಡಬಹುದು. ಇದಕ್ಕೆಲ್ಲ ಸೂಕ್ತ ಸಮಯದಲ್ಲಿ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ