ಪತಿಗೆ ಮದ್ಯ ಕುಡಿಸಿ ಪ್ರಿಯಕರನ ಜೊತೆ ಸೇರಿ ತಲೆ ಕತ್ತರಿಸಿದ ಪತ್ನಿ !

ಉತ್ತರ ಪ್ರದೇಶದ ಉನ್ನಾವೋದಲ್ಲಿ ದಿಗ್ರ್ಭಮೆಗೊಳಿಸುವ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಗೆ ಮದ್ಯ ಕುಡಿಸಿ, ತಲೆ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿದ್ದಾಳೆ. ತದನಂತರ ಮೃತದೇಹವನ್ನು ಚರಂಡಿಗೆ ಎಸೆಯಲಾಗಿದೆ. ಈ ಕೃತ್ಯದಲ್ಲಿ ಪ್ರಿಯಕರ ಹಾಗೂ ಆತನ ಸ್ನೇಹಿತನೂ ಭಾಗಿಯಾಗಿದ್ದಾನೆ ಎನ್ನಲಾಗಿದ್ದು, ಸದ್ಯ ಪತ್ನಿ ಹಾಗೂ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಉನ್ನಾವೋದ ಬದರ್ಕಾ ಪ್ರದೇಶದ ತುರ್ಕಿಹಾ ಬದರ್ಕಾ ಗ್ರಾಮದಲ್ಲಿ ನಡೆದಿದೆ. ಇಮ್ರಾನ್ ಎಂಬ ವ್ಯಕ್ತಿಯನ್ನು ಆತನ ಪತ್ನಿ ಶೀಬಾ ಮತ್ತು ಆಕೆಯ ಪ್ರಿಯಕರ ಫರ್ಮನ್ ಸೇರಿ ಕೊಂದಿದ್ದಾರೆ. ಶೀಬಾ ಮತ್ತು ಫರ್ಮನ್ ಕಳೆದ ಮೂರು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು. ವಿದೇಶದಿಂದ 25 ದಿನಗಳ ಹಿಂದೆ ವಾಪಸ್ಸಾಗಿದ್ದ ಫರ್ಮನ್‌ನ ಸ್ನೇಹಿತ ರಫೀಕ್ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.

ಕೊಲೆಗೆ ಕಾರಣವೇನು ?

ಇಮ್ರಾನ್‌ಗೆ ಮದ್ಯಪಾನದ ಚಟವಿತ್ತು. ಆತ ಪ್ರತಿದಿನ ಕುಡಿದು ಬಂದು ಶೀಬಾಳೊಂದಿಗೆ ಜಗಳವಾಡುತ್ತಿದ್ದ. ಇಮ್ರಾನ್‌ನಿಂದ ತನ್ನ ಆಸೆಗಳು ಈಡೇರುತ್ತಿಲ್ಲ ಎಂದು ಶೀಬಾ ಅಸಮಾಧಾನಗೊಂಡಿದ್ದಳು. ಫರ್ಮನ್ ವಿದೇಶದಿಂದ ಬಂದ ನಂತರ ಶೀಬಾ ಆತನನ್ನು ಭೇಟಿಯಾಗಲು ಆರಂಭಿಸಿದ್ದಳು. ಆದರೆ, ಇಮ್ರಾನ್‌ಗೆ ಇವರ ಸಂಬಂಧದ ಬಗ್ಗೆ ತಿಳಿದುಬಂದಿದ್ದು, ಆತ ಶೀಬಾಳನ್ನು ಥಳಿಸಿ ಮನೆಯಿಂದ ಹೊರಗೆ ಹೋಗದಂತೆ ತಡೆದಿದ್ದ.

ಇದರಿಂದ ಕೆರಳಿದ ಶೀಬಾ, ಫರ್ಮನ್‌ಗೆ ವಿಷಯ ತಿಳಿಸಿದ್ದಾಳೆ. ಇಬ್ಬರೂ ಸೇರಿ ಇಮ್ರಾನ್‌ನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ. ಅವರ ಈ ಯೋಜನೆಗೆ ಫರ್ಮನ್‌ನ ಸ್ನೇಹಿತ ರಫೀಕ್ ಕೂಡ ನೆರವಾಗಿದ್ದಾನೆ.

ಹತ್ಯೆಯ ಸರಣಿ ಕೃತ್ಯ

ಅಪರಾಧಿಗಳು ಮೊದಲು ಇಮ್ರಾನ್‌ಗೆ ಮದ್ಯಪಾನ ಮಾಡಿಸಿದ್ದಾರೆ. ನಂತರ ಆತನನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ, ತಲೆಯನ್ನು ದೇಹದಿಂದ ಬೇರ್ಪಡಿಸಿ ಕೊಲೆ ಮಾಡಿದ್ದಾರೆ. ಬಳಿಕ ತಲೆಯಿಲ್ಲದ ದೇಹವನ್ನು ನಗರದ ಚರಂಡಿಯ ಜೌಗು ಪ್ರದೇಶಕ್ಕೆ ಎಸೆದು ಪರಾರಿಯಾಗಿದ್ದಾರೆ.

ಕಂಚನ್‌ಖೇಡಾ ಬಳಿ ನಗರದ ಚರಂಡಿಯಲ್ಲಿ ಇಮ್ರಾನ್‌ನ ತಲೆ ಕತ್ತರಿಸಿದ ದೇಹ ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮಂಗಳವಾರ ಈ ಪ್ರಕರಣವನ್ನು ಬೇಧಿಸಿದ ಪೊಲೀಸರು, ಇಮ್ರಾನ್‌ನ ಪತ್ನಿ ಶೀಬಾ ಮತ್ತು ಆಕೆಯ ಪ್ರಿಯಕರ ಫರ್ಮನ್‌ನನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ರಫೀಕ್ ಇನ್ನೂ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read