ವಾರಾಣಸಿ: ಕಾಶಿ ನಗರಿಯಲ್ಲಿ ಇತ್ತೀಚೆಗೆ ನಡೆದ ಭೀಕರ ಅತ್ಯಾಚಾರ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. 19 ವರ್ಷದ ಯುವತಿಯನ್ನು 23 ಮಂದಿ ಆರೋಪಿಗಳು ಸೇರಿ ಆರು ದಿನಗಳ ಕಾಲ ವಿವಿಧ ಸ್ಥಳಗಳಲ್ಲಿ ಕೂಡಿಹಾಕಿ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣವು ಕೇವಲ ಅತ್ಯಾಚಾರಕ್ಕೆ ಸೀಮಿತವಾಗದೆ, ಮಾದಕ ದ್ರವ್ಯ ಜಾಲ ಮತ್ತು ಲೈಂಗಿಕ ಶೋಷಣೆಯ ಸಂಘಟಿತ ಜಾಲವನ್ನು ಅನಾವರಣಗೊಳಿಸಿದೆ. ಈವರೆಗೆ ಪೊಲೀಸರು ಎಫ್‌ಐಆರ್‌ನಲ್ಲಿ ಹೆಸರಿಸಲಾದ 23 ಆರೋಪಿಗಳಲ್ಲಿ 12 ಮಂದಿಯನ್ನು ಬಂಧಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಾರಾಣಸಿಗೆ ಆಗಮಿಸಿದ ಕೂಡಲೇ ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪೊಲೀಸ್ ಆಯುಕ್ತರು, ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಪ್ರಧಾನಿಗೆ ತನಿಖೆಯ ವಿವರಗಳನ್ನು ನೀಡಿದ್ದಾರೆ.
ಈ ಕೃತ್ಯದ ಕೇಂದ್ರಬಿಂದುವಾಗಿದ್ದ ಕಾಂಟಿನೆಂಟಲ್ ಕೆಫೆಯ ಮಾಲೀಕ ಅನಮೋಲ್ ಗುಪ್ತಾ ಎಂಬಾತನೇ ಈ ದಂಧೆಯ ಸೂತ್ರಧಾರ ಎಂದು ಹೇಳಲಾಗಿದೆ. ಈತ ಎರಡು ವರ್ಷಗಳ ಹಿಂದೆ ಸಿಗ್ರಾದಲ್ಲಿ ನೂಡಲ್ಸ್ ಅಂಗಡಿ ನಡೆಸುತ್ತಿದ್ದನು. ಆದರೆ, ಅಲ್ಪಾವಧಿಯಲ್ಲಿಯೇ ಕಾಂಟಿನೆಂಟಲ್ ಕೆಫೆಯ ಮಾಲೀಕನಾಗಿ ಬೆಳೆದಿದ್ದು, ಇಲ್ಲಿಂದಲೇ ತನ್ನ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದನು. ಗುಪ್ತಾನಿಗೆ 15 ಮಂದಿಯ ತಂಡವಿದ್ದು, ಯುವತಿಯರನ್ನು ಬಲೆಗೆ ಬೀಳಿಸಿ, ಅವರಿಗೆ ಮಾದಕ ದ್ರವ್ಯ ನೀಡಿ ಲೈಂಗಿಕವಾಗಿ ಶೋಷಿಸಿ, ಆ ದೃಶ್ಯಗಳನ್ನು ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಈ ಮೂಲಕ ಸಂತ್ರಸ್ತೆಯರನ್ನು ನಿರಂತರವಾಗಿ ಶೋಷಣೆ ಮಾಡಲಾಗುತ್ತಿತ್ತು.
ಪ್ರತಿಯೊಬ್ಬ ಗ್ಯಾಂಗ್ ಸದಸ್ಯನಿಗೂ ನಿರ್ದಿಷ್ಟ ಜವಾಬ್ದಾರಿಗಳನ್ನು ನೀಡಲಾಗಿತ್ತು. ಸೋಹೈಲ್ ಎಂಬಾತ ಕಾನೂನು ವಿದ್ಯಾರ್ಥಿಯಾಗಿದ್ದು, ಗುಪ್ತನ ಬಲಗೈಯಾಗಿ ಕಾರ್ಯನಿರ್ವಹಿಸುತ್ತಿದ್ದನು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಜ್ ವಿಶ್ವಕರ್ಮ ಮಾದಕ ದ್ರವ್ಯ ಪೂರೈಕೆಯ ಜವಾಬ್ದಾರಿ ಹೊತ್ತಿದ್ದನು. ಸಾಜಿದ್ ಯುವತಿಯರನ್ನು ಬಲೆಗೆ ಬೀಳಿಸುತ್ತಿದ್ದರೆ, ಆಯುಷ್ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಕೆಫೆಗೆ ಆಕರ್ಷಿಸುತ್ತಿದ್ದನು. ಕಾರ್ ಮೆಕ್ಯಾನಿಕ್ ಆಗಿದ್ದ ತನ್ವೀರ್ ಅಲಿಯಾಸ್ ಸಮೀರ್ ಸ್ವತಃ ಮಾದಕ ವ್ಯಸನಿಯಾಗಿದ್ದು, ಗ್ರಾಹಕರನ್ನು ಕರೆತರುವ ಕೆಲಸ ಮಾಡುತ್ತಿದ್ದನು.
12ನೇ ತರಗತಿಯಲ್ಲಿ ಓದುತ್ತಿದ್ದ ಇಮ್ರಾನ್ ಲೈಂಗಿಕ ದೌರ್ಜನ್ಯದ ವಿಡಿಯೋಗಳನ್ನು ಸೆರೆಹಿಡಿಯುತ್ತಿದ್ದನು. ದಾನಿಶ್ ಕಾಂಟಿನೆಂಟಲ್ ಕೆಫೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೈಪ್ ಸೃಷ್ಟಿಸುತ್ತಿದ್ದನು. ಆತನ ಮೊಬೈಲ್‌ನಲ್ಲಿ ಸುಮಾರು 18 ಲೈಂಗಿಕ ದೌರ್ಜನ್ಯದ ವಿಡಿಯೋಗಳು ಪತ್ತೆಯಾಗಿದ್ದು, ಈ ಗ್ಯಾಂಗ್‌ನಿಂದ ಅನೇಕ ಯುವತಿಯರು ಶೋಷಣೆಗೆ ಒಳಗಾಗಿರುವ ಸಾಧ್ಯತೆ ಇದೆ.
ಎಫ್‌ಐಆರ್ ಪ್ರಕಾರ, ಸಂತ್ರಸ್ತೆಯನ್ನು ಮಾರ್ಚ್ 29ರ ರಾತ್ರಿ ಲಾಲ್‌ಪುರ್ ಪಾಂಡೇಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕೆಯ ಸ್ನೇಹಿತೆಯ ಮನೆಗೆ ಹೋಗಿ ಹಿಂತಿರುಗುತ್ತಿದ್ದಾಗ ಪರಿಚಿತನಾದ ರಾಜ್ ವಿಶ್ವಕರ್ಮ ಭೇಟಿಯಾದನು. ಆತ ಆಕೆಯನ್ನು ಲಂಕಾ ಪ್ರದೇಶದಲ್ಲಿದ್ದ ತನ್ನ ಕೆಫೆಗೆ ಕರೆದೊಯ್ದು ರಾತ್ರಿಯಿಡೀ ಅತ್ಯಾಚಾರವೆಸಗಿದನು. ಮರುದಿನ, ಮಾರ್ಚ್ 30ರಂದು ಸಮೀರ್ ಮತ್ತು ಆಯುಷ್ ಸಿಂಗ್ ಹಾಗೂ ಇತರ ಕೆಲವರು ಆಕೆಯ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ ಅತ್ಯಾಚಾರವೆಸಗಿದರು. ನಂತರ ಸೋಹೈಲ್, ದಾನಿಶ್, ಅನಮೋಲ್, ಸಾಜಿದ್ ಮತ್ತು ಜಾಹೀರ್ ಕೂಡ ಸೇರಿಕೊಂಡರು. ಅವರೆಲ್ಲರೂ ಸಂತ್ರಸ್ತೆಗೆ ಮಾದಕ ದ್ರವ್ಯ ನೀಡಿ ಕಾಂಟಿನೆಂಟಲ್ ಕೆಫೆಗೆ ಕರೆದೊಯ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಅತ್ಯಾಚಾರವೆಸಗಿದರು.
ಇದಾದ ಬಳಿಕ ಏಪ್ರಿಲ್ 1ರಂದು ಸಾಜಿದ್ ತನ್ನ ಸ್ನೇಹಿತರೊಂದಿಗೆ ಆಕೆಯನ್ನು ಗರ್ಲ್ಸ್ ಹಾಸ್ಟೆಲ್ ಎಂಬ ಹೋಟೆಲ್‌ಗೆ ಕರೆದೊಯ್ದನು. ಅಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಆದಾಗಲೇ ಇದ್ದರು. ಸಂತ್ರಸ್ತೆ ನಿರಾಕರಿಸಿದರೂ ಆ ಮೂವರಿಗೆ ಮಸಾಜ್ ಮಾಡಲು ಒತ್ತಾಯಿಸಲಾಯಿತು. ಮಸಾಜ್ ಮಾಡುವಾಗ ಅವರಲ್ಲಿ ಒಬ್ಬ ಆಕೆಯ ಮೇಲೆ ಅತ್ಯಾಚಾರವೆಸಗಿದನು. ಅಲ್ಲಿಂದ ಇಮ್ರಾನ್ ಬೈಕ್‌ನಲ್ಲಿ ಬಲವಂತವಾಗಿ ಮತ್ತೊಂದು ಹೋಟೆಲ್‌ಗೆ ಕರೆದೊಯ್ದು ಮತ್ತೆ ಮಾದಕ ದ್ರವ್ಯ ನೀಡಿ ಅತ್ಯಾಚಾರವೆಸಗಿದನು. ನಂತರ ಸಾಜಿದ್ ತನ್ನ ಸ್ನೇಹಿತರೊಂದಿಗೆ ಸಂತ್ರಸ್ತೆಯನ್ನು ಔರಂಗಾಬಾದ್‌ನ ಗೋದಾಮಿಗೆ ಕರೆದೊಯ್ದನು. ಅಲ್ಲಿ ಜೈಬ್ ಎಂಬಾತ ಈಗಾಗಲೇ ಇದ್ದು, ಆತನು ಅತ್ಯಾಚಾರವೆಸಗಿದನು. ಸಂತ್ರಸ್ತೆಯ ಶೋಷಣೆ ಇಲ್ಲಿಗೆ ನಿಲ್ಲಲಿಲ್ಲ. ನಂತರ ಸಾಜಿದ್, ಅಮನ್ ಮತ್ತು ಇನ್ನೊಬ್ಬ ವ್ಯಕ್ತಿಯೊಂದಿಗೆ ಆಕೆಯನ್ನು ಒಂದು ಕೋಣೆಗೆ ಕರೆದೊಯ್ದನು. ಅಮನ್ ಮತ್ತು ಇನ್ನೊಬ್ಬ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿದರು. ಅತ್ಯಾಚಾರದ ನಂತರ ಆಕೆಯನ್ನು ರಸ್ತೆಯ ಬದಿಯಲ್ಲಿ ಬಿಟ್ಟು ಹೋದರು. ಸಂತ್ರಸ್ತೆ ರಾತ್ರಿಯಿಡೀ ಸಿಗ್ರಾ ಐಪಿ ಮಾಲ್ ಬಳಿ ಕಳೆದಳು.
ಏಪ್ರಿಲ್ 2ರಂದು ರಾಜ್ ಖಾನ್ ಮತ್ತು ಆತನ ಸ್ನೇಹಿತ ಆಕೆಯನ್ನು ಮಾಲ್ ಬಳಿ ಕಂಡುಕೊಂಡರು. ಅವರು ಆಕೆಯನ್ನು ಹುಕುಲ್ಗಂಜ್ ಬಗ್ವಾನಾಲದಲ್ಲಿರುವ ಮನೆಯೊಂದಕ್ಕೆ ಕರೆದೊಯ್ದು, ಮಾದಕ ದ್ರವ್ಯ ಬೆರೆಸಿದ ನೂಡಲ್ಸ್ ತಿನ್ನಿಸಿ ಅತ್ಯಾಚಾರವೆಸಗಿದರು. ನಂತರ ಆಕೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಅಸ್ಸಿ ಘಾಟ್‌ನಲ್ಲಿ ಬಿಟ್ಟು ಹೋದರು. ಹೇಗೋ ಮರುದಿನ ಸಂತ್ರಸ್ತೆ ತನ್ನ ಸ್ನೇಹಿತೆಯ ಮನೆಗೆ ತಲುಪಿದಳು. ಏಪ್ರಿಲ್ 3ರ ಸಂಜೆ ಸ್ನೇಹಿತೆಯ ಮನೆಯಿಂದ ಹೊರಟಾಗ ದಾನಿಶ್ ಭೇಟಿಯಾದನು. ಆತ ಆಕೆಯನ್ನು ಒಂದು ಕೋಣೆಗೆ ಕರೆದೊಯ್ದಿದ್ದು, ಅಲ್ಲಿ ಸೋಹೈಲ್, ಶೋಯೆಬ್ ಮತ್ತು ಇನ್ನೊಬ್ಬ ವ್ಯಕ್ತಿ ಈಗಾಗಲೇ ಇದ್ದರು. ಅವರೆಲ್ಲರೂ ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗಿ ಚೌಕ್‌ಘಾಟ್ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಹೋದರು. ಅಂತಿಮವಾಗಿ ಏಪ್ರಿಲ್ 4ರಂದು ಸಂತ್ರಸ್ತೆ ತನ್ನ ಮನೆಗೆ ತಲುಪಲು ಯಶಸ್ವಿಯಾದಳು. ಮನೆಗೆ ತಲುಪಿದ ನಂತರ, ಮಾದಕ ದ್ರವ್ಯದ ಅಮಲಿನಿಂದಾಗಿ 24 ಗಂಟೆಗಳ ಕಾಲ ಆಕೆಗೆ ಮಾತನಾಡಲು ಸಾಧ್ಯವಾಗಲಿಲ್ಲ. ಪ್ರಜ್ಞೆ ಬಂದ ನಂತರ ತನ್ನ ಕುಟುಂಬಕ್ಕೆ ಆಘಾತಕಾರಿ ಘಟನೆಯನ್ನು ವಿವರಿಸಿದಳು.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಏಪ್ರಿಲ್ 7ರಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.