“ಭೂಲ್ ಭುಲಯ್ಯ 3” ನಂತರ ಮತ್ತೆ ಒಂದಾದ ತಾರೆಗಳು !

ಬಾಲಿವುಡ್‌ನ ಖ್ಯಾತ ನಟಿ ಮಾಧುರಿ ದೀಕ್ಷಿತ್ ಹಾಗೂ ಯುವ ಪ್ರತಿಭೆ ತೃಪ್ತಿ ಡಿಮ್ರಿ ಮತ್ತೆ ಒಂದಾಗುತ್ತಿದ್ದಾರೆ. ಈ ಬಾರಿ ಇವರಿಬ್ಬರು “ಮಾ ಬೆಹನ್” ಎಂಬ ಹಾಸ್ಯ-ನಾಟಕ ಶೈಲಿಯ ಚಿತ್ರದಲ್ಲಿ ಅಮ್ಮ-ಮಗಳ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ಈ ಚಿತ್ರವು ಡಿಜಿಟಲ್ ವೇದಿಕೆಯಲ್ಲಿ (ಓಟಿಟಿ) ಬಿಡುಗಡೆಯಾಗುವ ಸಾಧ್ಯತೆ ಇದೆ.

ಮಾಧ್ಯಮ ವರದಿಗಳ ಪ್ರಕಾರ, ಚಿತ್ರದ ಚಿತ್ರೀಕರಣವು ಮುಂದಿನ ತಿಂಗಳು ಅಂದರೆ ಮೇ ತಿಂಗಳಲ್ಲಿ ಪ್ರಾರಂಭವಾಗಲಿದೆ. ಚಿತ್ರದ ಕುರಿತಾದ ಹೆಚ್ಚಿನ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲವಾದರೂ, ಚಿತ್ರತಂಡವು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ನೀಡುವ ನಿರೀಕ್ಷೆಯಿದೆ. ಈ ಹಿಂದೆ ಮಾಧುರಿ ಮತ್ತು ತೃಪ್ತಿ “ಭೂಲ್ ಭುಲಯ್ಯ 3” ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿರುವುದು ಗಮನಾರ್ಹ.

ವರದಿಯ ಪ್ರಕಾರ, “ಮಾ ಬೆಹನ್” ಚಿತ್ರವು ತಾಯಿ ಮತ್ತು ಮಗಳ ನಡುವಿನ ಬಾಂಧವ್ಯದ ಸುತ್ತ ಹೆಣೆಯಲಾದ ಕಥೆಯನ್ನು ಹೊಂದಿದೆ. ಈ ಪಾತ್ರಗಳಿಗೆ ಮಾಧುರಿ ಮತ್ತು ತೃಪ್ತಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಜೀವ ತುಂಬಲಿದ್ದಾರೆ ಎಂದು ಹೇಳಲಾಗಿದೆ. ಹಿರಿಯ ನಟ ರವಿ ಕಿಶನ್ ಮತ್ತು ಧರ್ನಾ ದುರ್ಗಾ ಕೂಡ ಈ ಚಿತ್ರದ ತಾರಾಗಣವನ್ನು ಸೇರುವ ನಿರೀಕ್ಷೆಯಿದೆ. ಇತ್ತೀಚೆಗಷ್ಟೇ ಮಾಧುರಿ ಮತ್ತು ತೃಪ್ತಿ ಚಿತ್ರದ ನಿರ್ಮಾಣ ಸಂಸ್ಥೆಗೆ ಭೇಟಿ ನೀಡಿದ್ದು, ಇವರ ಸಹಯೋಗದ ಕುರಿತಾದ ಊಹಾಪೋಹಗಳಿಗೆ ಕಾರಣವಾಗಿತ್ತು.

ಇದಲ್ಲದೆ, ತೃಪ್ತಿ ಡಿಮ್ರಿ ಇದೇ ಮೊದಲ ಬಾರಿಗೆ ಶಾಹಿದ್ ಕಪೂರ್ ಅವರೊಂದಿಗೆ ವಿಶಾಲ್ ಭಾರದ್ವಾಜ್ ಅವರ “ಅರ್ಜುನ್ ಉಸ್ತಾರ” ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಣಬೀರ್ ಕಪೂರ್ ಅಭಿನಯದ “ಅನಿಮಲ್” ಚಿತ್ರದ ಯಶಸ್ಸಿನ ನಂತರ ತೃಪ್ತಿ ರಾಷ್ಟ್ರಮಟ್ಟದಲ್ಲಿ ಜನಪ್ರಿಯತೆ ಗಳಿಸಿದರು. 2024 ರಲ್ಲಿ ಅವರು “ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ,” “ಬ್ಯಾಡ್ ನ್ಯೂಜ್” ಮತ್ತು “ಭೂಲ್ ಭುಲಯ್ಯ 3” ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ, ತೃಪ್ತಿ ಸಿದ್ಧಾಂತ್ ಚತುರ್ವೇದಿ ಅವರೊಂದಿಗೆ ಕರಣ್ ಜೋಹರ್ ನಿರ್ಮಾಣದ “ಧಡಕ್ 2” ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದು 2018 ರ ಹಿಟ್ ಚಿತ್ರ “ಧಡಕ್” ನ ಮುಂದುವರಿದ ಭಾಗವಾಗಿದ್ದು, ಈ ಚಿತ್ರದ ಮೂಲಕ ಜಾನ್ವಿ ಕಪೂರ್ ಮತ್ತು ಇಶಾನ್ ಖಟ್ಟರ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read