ಹಾವೇರಿ: ಹಾವೇರಿ ಜಿಲ್ಲೆ ಶಿಗ್ಗಾಂವಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಉಪನ್ಯಾಸಕರು ಪರೀಕ್ಷೆ ಮುಗಿದ ಕೇವಲ ಮೂರು ಗಂಟೆಗಳಲ್ಲಿ ಆರು ವಿಭಾಗಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಿದ್ದಾರೆ.
ಪರೀಕ್ಷೆ ಮುಗಿದ ನಂತರ ತಿಂಗಳುಗಟ್ಟಲೆ ಫಲಿತಾಂಶಕ್ಕಾಗಿ ಕಾಯಬೇಕಿಲ್ಲ ಎನ್ನುವ ಸಂದೇಶವನ್ನು ಕರ್ನಾಟಕ ಜಾನಪದ ವಿವಿ ನೀಡಿದೆ. ಡಾ.ಕೆ. ಶಿವಶಂಕರ ಅವರು ಮೌಲ್ಯಮಾಪನ ಕುಲಸಚಿವರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದರು. 2024 -25 ನೇ ಸಾಲಿನ ಎಂಎ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಮೊದಲು ಉಪನ್ಯಾಸಕರೊಂದಿಗೆ ಸಭೆ ನಡೆಸಿದ ಅವರು ಪರೀಕ್ಷೆ ಮುಗಿದ ದಿನವೇ ಫಲಿತಾಂಶ ಪ್ರಕಟಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸಿದ್ದರು.
ಅಂತೆಯೇ ಪರೀಕ್ಷೆ ಮುಗಿದ ತಕ್ಷಣ ಉಪನ್ಯಾಸಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿ ಅಂಕಗಳನ್ನು ಯುಯುಸಿಎಂಸ್ ತಂತ್ರಾಂಶದಲ್ಲಿ ದಾಖಲಿಸಿದ್ದಾರೆ.
