ವೈಜ್ಞಾನಿಕ ಮನೋಭಾವ, ವೈಚಾರಿಕತೆ ಅಳವಡಿಸಿಕೊಳ್ಳುವುದೇ ವಿಜ್ಞಾನದ ಉದ್ದೇಶ: ಸಿಎಂ ಸಿದ್ಧರಾಮಯ್ಯ

ಬಸವಣ್ಣನವರ ನಾಡಿನಲ್ಲಿ ಹುಟ್ಟಿದ ನಾವು ಇಂದಿಗೂ ಕೂಡ ಮೌಢ್ಯಗಳನ್ನು ಆಚರಿಸುತ್ತಿರುವುದು ದುರ್ದೈವದ ಸಂಗತಿ. ಮೌಢ್ಯ ಹಾಗೂ ಕಂದಾಚಾರಗಳನ್ನು ಕೊನೆಗಾಣಿಸಬೇಕು. ಭ್ರಾತೃತ್ವ, ಸ್ವಾತಂತ್ರ್ಯ, ಸಮಾನತೆಗಳನ್ನು ಸಂವಿಧಾನ ನೀಡಿದ್ದು, ಇದು ಅಕ್ಷರಶ: ಜಾರಿಯಾಗದೇ, ಜಾತಿ ವ್ಯವಸ್ಥೆಯಾಗಲಿ, ಅಸಮಾನತೆಯಾಗಲಿ ಹೋಗುವುದಿಲ್ಲ. ಮಾನವರಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಶಿಕ್ಷಣ ಅಗತ್ಯ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಹಾವೇರಿ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಡೆದ ಭಾರತ ರತ್ನ ಪ್ರೊ||ಸಿ ಎನ್ ಆರ್ ರಾವ್ 10ನೇ ವರ್ಷದ ವಿಜ್ಞಾನ ವಿಸ್ಕೃತ ಕಾರ್ಯಕ್ರಮ ಹಾಗೂ 2025ನೇ ಸಾಲಿನ ಪ್ರತಿಷ್ಠಿತ ಚಂದನ ಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಎಲ್ಲ ಧರ್ಮಗಳೂ ಮಾನವೀಯತೆಯನ್ನು ಬೋಧಿಸುತ್ತವೆ. ಪಟ್ಟಭದ್ರಹಿತಾಸಕ್ತಿಗಳು ಧರ್ಮವನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಕಷ್ಟದಲ್ಲಿದ್ದಾಗ ತನ್ನ ಹಣೆಬರಹವೆಂದು ಸುಮ್ಮನಿರದೇ, ಇಚ್ಛಾಶಕ್ತಿಯಿಂದ ಶ್ರಮಿಸಿದರೆ, ಯಾವುದೇ ವರ್ಗದವರೂ ಕೂಡ ಸಾಧನೆಗಳನ್ನು ಮಾಡಬಹುದಾಗಿದೆ. ಶಿಕ್ಷಣವೆಂಬುದು ಒಂದು ವರ್ಗಕ್ಕೆ ಸೀಮಿತವಾದುದಲ್ಲ. ಪ್ರಾಮಾಣಿಕ ಪ್ರಯತ್ನ ಮತ್ತು ಅವಕಾಶಗಳ ಸದುಪಯೋಗ ಪಡೆದು, ಉನ್ನತ ಸ್ಥಾನಕ್ಕೆ ತಲುಪಬಹುದು. ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಅಳವಡಿಸಿಕೊಳ್ಳುವುದೇ ವಿಜ್ಞಾನದ ಉದ್ದೇಶ ಎಂದರು.

ಪ್ರಧಾನ ಕಾರ್ಯದರ್ಶಿಗಳಾಗಿದ್ದ ಬಿ.ಎಸ್.ಪಾಟೀಲರೊಂದಿಗೆ ಒಮ್ಮೆ ಪ್ರವಾಸ ಹೋಗಿದ್ದೆ.  ರೈತ ಕುಟುಂಬದಿಂದ ಬಂದು ವಿದ್ಯಾಭ್ಯಾಸ ಮಾಡಿ ಸೈನ್ಯ ಸೇರಿ ನಂತರ ಐಎಎಸ್ ಅಧಿಕಾರಿಯಾದವರು ಅವರು. ಅವರಲ್ಲಿ ಇಚ್ಚಾಶಕ್ತಿ ಇದ್ದುದ್ದರಿಂದ ಅಪಘಾತವಾಗಿದ್ದರೂ ಐಎಎಸ್ ಉತ್ತೀರ್ಣರಾಗಲು ಸಾಧ್ಯವಾಯಿತು. ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿದ್ದಾರೆ.  ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ನಾಡಿನ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದರು ಎಂದರು.

ಜೆ. ಹೆಚ್. ಪಟೇಲರ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್ಚು ಕೆಲಸವನ್ನು ಮಾಡಿದ್ದರು. ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರನ್ನು ವಿಭಜಿಸಲು ಪಾಟೀಲರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈಗಲೂ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದು, ವರದಿಯನ್ನು ಸಲ್ಲಿಸಿದ್ದಾರೆ. ಗ್ರೇಟರ್ ಬೆಂಗಳೂರಿನ ಒಳಗೆ ಐದು ಕಾರ್ಪೋರೇಷನ್ ಗಳನ್ನಾಗಿ ವಿಭಜಿಸಲಾಗಿದೆ. ಪಾಟೀಲರು ಈ ನಾಡಿಗೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅವರನ್ನು ಗುರುತಿಸಿ ಚಂದನ ಎಜುಕೇಶನಲ್ ಸಂಸ್ಥೆ ಆಯ್ಕೆ ಮಾಡಿರುವುದು ಸೂಕ್ತವಾಗಿದೆ ಎಂದರು.

ಸಿ.ಎನ್.ಆರ್ ರಾವ್ ಈ ದೇಶ ಕಂಡ ಅಪರೂಪದ ವಿಜ್ಞಾನಿ. ಎಸ್.ಎಸ್.ಎಲ್.ಸಿ ವರೆಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿತವರು. ಪಾಟೀಲರು ಆಂಗ್ಲ ಮಾಧ್ಯಮ ಕಲಿತವರು. ಸಿ.ಎನ್.ಆರ್ ರಾವ್ ವಿಜ್ಞಾನದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದವರು. ಸಂಶೋಧನೆಯನ್ನೇ ಜೀವನವಾಗಿಸಿಕೊಂಡಿದ್ದ ಅವರಿಗೆ ಅವರ ಧರ್ಮಪತ್ನಿ ಒತ್ತಾಸೆಯಾಗಿದ್ದರು ಎಂದರು.

ದೇಶದ ಪ್ರಧಾನಿ ನೆಹರು ಅವರು ಎಲ್ಲರೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದ್ದರು. ಚಂದನ ಶ್ರೀ ವಿದ್ಯಾಲಯದಲ್ಲಿ ವಿಜ್ಞಾನಕ್ಕೆ, ವೈಚಾರಿಕತೆಗೆ ಹೆಚ್ಚು ಒತ್ತು ನೀಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read