ನವದೆಹಲಿ: ಭಕ್ತರು ದೇವಾಲಯಗಳಿಗೆ ದೇಣಿಗೆ, ಕಾಣಿಕೆ ರೂಪದಲ್ಲಿ ನೀಡುವ ಹಣ ಕಲ್ಯಾಣ ಮಂದಿರ ನಿರ್ಮಾಣ ಮಾಡುವ ಉದ್ದೇಶಕ್ಕಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ತಮಿಳುನಾಡಿನ ವಿವಿಧೆಡೆ ಐದು ದೇವಾಲಯಗಳಿಗೆ ಸೇರಿದ ಹಣದಿಂದ ಕಲ್ಯಾಣ ಮಂದಿರ ನಿರ್ಮಿಸಲು ತಮಿಳುನಾಡು ಸರ್ಕಾರ ಅನುಮತಿ ನೀಡಿದ್ದು, ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ರದ್ದು ಮಾಡಿತ್ತು. ಆಗಸ್ಟ್ 19ರ ಆದೇಶದಲ್ಲಿ ಮದುವೆ ಕಾರ್ಯಗಳಿಗೆ ನೀಡುವ ಉದ್ದೇಶಕ್ಕೆ ಕಲ್ಯಾಣ ಮಂಟಪಗಳನ್ನು ನಿರ್ಮಿಸುವ ಸರ್ಕಾರದ ನಿರ್ಧಾರ ಧಾರ್ಮಿಕ ಉದ್ದೇಶಗಳ ವ್ಯಾಖ್ಯಾನದೊಳಗೆ ಇಲ್ಲವೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಈ ಆದೇಶ ನೀಡಿದೆ.
ಭಕ್ತರು ಕಲ್ಯಾಣ ಮಂದಿರಗಳನ್ನು ನಿರ್ಮಿಸುವ ಉದ್ದೇಶಕ್ಕೆ ದೇವಾಲಯಗಳಿಗೆ ಹಣ ನೀಡುವುದಿಲ್ಲ. ಅವರು ನೀಡುವ ದೇಣಿಗೆ ಅಥವಾ ಕಾಣಿಕೆ ದೇವಾಲಯದ ಸುಧಾರಣೆಗಾಗಿ ಆಗಿರುತ್ತದೆ. ದೇವಾಲಯದ ಆವರಣದಲ್ಲಿ ಮದುವೆ ನಡೆಯುವಾಗ ಅಶ್ಲೀಲ ಹಾಡು ಹಾಕಿದರೆ ಅದು ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತರುವುದಿಲ್ಲವೇ? ದೇವಾಲಯದ ಹಣ ಬಳಸುವುದಾದರೆ ಅದನ್ನು ಶಿಕ್ಷಣ ಮತ್ತು ವೈದ್ಯಕೀಯ ಸಂಸ್ಥೆಗಳಂತ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ತಮಿಳುನಾಡು ಸರ್ಕಾರ ಕೈಗೊಂಡ ನಿರ್ಧಾರ ಸರಿಯೋ ತಪ್ಪೋ ಎನ್ನುವುದನ್ನು ಪರಿಶೀಲಿಸಬೇಕಿದ್ದು, ನವೆಂಬರ್ 19ಕ್ಕೆ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ.