ಸಪ್ತಪದಿಯಲ್ಲಿ ಆರನೇ ಹೆಜ್ಜೆ ಹಾಕುವಾಗಲೇ ವರನಿಗೆ ಬಂತು ಕರೆ ; ಮರುಕ್ಷಣವೇ ಮದುವೆ ಕ್ಯಾನ್ಸಲ್‌ !

ಕರೌಲಿ: ರಾಜಸ್ಥಾನದ ಕರೌಲಿ ಜಿಲ್ಲೆಯ ನದೋತಿಯಲ್ಲಿ ನಡೆದ ಮದುವೆಯೊಂದು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಮದುವೆಯ ಆರು ಸುತ್ತುಗಳು ಮುಗಿದ ನಂತರ, ಏಕಾಏಕಿ ವರ ಏಳನೇ ಸುತ್ತನ್ನು ಹಾಕಲು ನಿರಾಕರಿಸಿದ್ದರಿಂದ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಕೋಪಗೊಂಡ ವಧುವಿನ ಮನೆಯವರು ವರ ಹಾಗೂ ಆತನ ಕುಟುಂಬಸ್ಥರನ್ನು ಒತ್ತೆಯಾಳಾಗಿರಿಸಿಕೊಂಡ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಮದುವೆಯ ವಿಧಿವಿಧಾನಗಳು ಸುಸೂತ್ರವಾಗಿ ನಡೆಯುತ್ತಿದ್ದವು. ಆದರೆ, ಆರನೇ ಸುತ್ತು ಮುಗಿದ ತಕ್ಷಣ ವರನಿಗೆ ಒಂದು ಫೋನ್ ಕರೆ ಬಂದಿತು. ಆ ಕರೆಯ ನಂತರ ಆತ ಮದುವೆಯನ್ನು ಮುಂದುವರೆಸಲು ನಿರಾಕರಿಸಿದನು ಎನ್ನಲಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ವಧುವಿನ ಮನೆಯವರು ತೀವ್ರ ಕೋಪಗೊಂಡು ಗಲಾಟೆ ಮಾಡಿದರು. ಅಷ್ಟೇ ಅಲ್ಲದೆ, ವರ, ಆತನ ತಂದೆ ಮತ್ತು ಕೆಲವು ಸಂಬಂಧಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡರು.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ನದೋತಿ ಪೊಲೀಸ್ ಠಾಣೆಯ ಅಧಿಕಾರಿ ವೀರ್ ಸಿಂಗ್ ಅವರು ಎರಡೂ ಕಡೆಯವರ ಜೊತೆ ಮಾತನಾಡಿದ್ದು, ಆದರೆ ಯಾರೂ ಕಾನೂನು ಕ್ರಮ ಕೈಗೊಳ್ಳಲು ಮುಂದೆ ಬರದ ಕಾರಣ ಪೊಲೀಸರು ಮಧ್ಯಸ್ಥಿಕೆ ವಹಿಸುವ ಸ್ಥಿತಿಯಲ್ಲಿದ್ದಾರೆ. ಗ್ರಾಮ ಪಂಚಾಯಿತಿ ಹಾಗೂ ಹಿರಿಯ ಮುಖಂಡರು ಈ ವಿಷಯವನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ.

ವರದಿಗಳ ಪ್ರಕಾರ, ವಧುವಿನ ಕಡೆಯವರು ಮದುವೆಗೆ ಸುಮಾರು 56 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಪಂಚಾಯಿತಿಯು ಈ ಹಣವನ್ನು ವರನ ಕಡೆಯಿಂದ ವಾಪಸ್ ಪಡೆಯಬೇಕೇ ಅಥವಾ ಬೇಡವೇ ಎಂಬುದರ ಕುರಿತು ಚರ್ಚೆ ನಡೆಸುತ್ತಿದೆ. ಮದುವೆಗೆ ಮುನ್ನ ವರನಿಗೆ ಬೇರೊಬ್ಬ ಹುಡುಗಿಯಿಂದ ಕರೆ ಬಂದಿದ್ದೇ ಈ ಗೊಂದಲಕ್ಕೆ ಕಾರಣ ಎನ್ನಲಾಗಿದ್ದು, ಪಂಚಾಯಿತಿ ಮಟ್ಟದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಮುಂದುವರೆದಿವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read