ಬೆಳಗಾವಿ : ಟ್ಯೂಷನ್ ಗೆ ಹೊರಟ್ಟಿದ್ದ 9 ವರ್ಷದ ಬಾಲಕಿಯನ್ನು ದುಷ್ಕರ್ಮಿಯೋರ್ವ ಅಪಹರಣ ಮಾಡಲು ಯತ್ನಿಸಿದ ಘಟನೆ ನಿನ್ನೆ ಬೆಳಗಾವಿಯಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಮಾರುತಿ ನಗರದ ಗಜಾನನ್ ಪಾಟೀಲ್ (40) ಬಾಲಕಿಯ ಅಪಹರಣಕ್ಕೆ ಯತ್ನಿಸಿದ ಆರೋಪಿಯಾಗಿದ್ದು, ಈತ ಪೊಲೀಸರ ವಿಚಾರಣೆ ವೇಳೆ ತನಗೆ ಮದುವೆ ಆಗಿರಲಿಲ್ಲ. ಹಾಗಾಗಿ ಬಾಲಕಿಯ ಅಪಹರಣಕ್ಕೆ ಮುಂದಾಗಿದ್ದೆ ಎಂದು ಹೇಳಿದ್ದಾನೆ. ಆರೋಪಿ ಕೃತ್ಯದ ಹಿಂದಿನ ಉದ್ದೇಶ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಘಟನೆ ಹಿನ್ನೆಲೆ
9 ವರ್ಷದ ಬಾಲಕಿ ಎಂದಿನಂತೆ ಮನೆಯಿಂದ ಟ್ಯೂಷನ್ ಗೆ ಹೊರಟ್ಟಿದ್ದಳು. ಈ ವೇಳೆ ಬೆಳಗಾವಿಯ ಹಿಂದವಾಡಿ ಪೋಸ್ಟ್ ಆಫೀಸ್ ಬಳಿ ಬಂದ ಓರ್ವ ದುಷ್ಕರ್ಮಿ ಬಾಲಕಿಗೆ ಚಾಕ್ ಲೇಟ್ ಕೊಡುವ ನೆಪದಲ್ಲಿ ಹೋಗಿ ಬಾಲಕಿಯನ್ನು ಹೆಗಲ ಮೇಲೆ ಹಾಕಿಕೊಳ್ಳುತ್ತಾನೆ.ಇದರಿಂದ ಜೋರಾಗಿ ಬಾಲಕಿ ಕಿರುಚಲು ಆರಂಭಿಸಿದ್ದು, ಜನರು ಓಡಿಬರುತ್ತಾರೆ. ಆದರೂ ಪ್ರಯತ್ನ ಬಿಡದ ದುಷ್ಕರ್ಮಿ ಬಾಲಕಿಯನ್ನು ಎತ್ತಿಕೊಂಡು ಓಡಲು ಶುರು ಮಾಡುತ್ತಾರೆ. ಜನರು ಅಪಹರಣಕಾರರನ್ನು ಬೆನ್ನಟ್ಟಿದ್ದು, ನಂತರ ದುಷ್ಕರ್ಮಿ ಬಾಲಕಿಯನ್ನು ಕೆಳಗಿಳಿಸಿ ಜನರಿಂದ ತಪ್ಪಿಸಿಕೊಳ್ಳಲು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಘಟನೆ ಬಗ್ಗೆ ಬಾಲಕಿಯ ಪೋಷಕರು ದೂರು ನೀಡಿದ್ದು, ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. ನಂತರ ಸಿಸಿಟಿವಿ ಪರಿಶೀಲಿಸಿದ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿ ಆರೋಪಿಯನ್ನು ಬಂಧಿಸಿದ್ದಾರೆ.