ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲ್ಲೂಕಿನ ಬನ್ನೂರು ಸೇತುವೆ ಮೇಲೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ನದಿಗೆ ಬಿದ್ದು ನಾಪತ್ತೆಯಾಗಿದ್ದಾರೆ.
ಮೃತ ಮಗನನ್ನು ಮೈಸೂರಿನ ಬಿಎಂಶ್ರೀ ನಗರದ ನಿವಾಸಿ ಶಂಕರ್ (21) ಎಂದು ಗುರುತಿಸಲಾಗಿದೆ. ನಾಪತ್ತೆಯಾಗಿರುವ ತಾಯಿ ಪಾರ್ವತಿ.
ಕುಟುಂಬಸ್ಥರು ಮನೆ ದೇವರ ದರ್ಶನಕ್ಕೆ ತೆರಳಿ ವಾಪಸ್ ಬರುವಾಗ ಈ ದುರಂತ ಸಂಭವಿಸಿದೆ. ತಾಯಿ ಮತ್ತು ಮಗ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಕಾರು ವೇಗವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ, ಬೈಕ್‌ನಲ್ಲಿದ್ದ ಶಂಕರ್ ಸ್ಥಳದಲ್ಲೇ ಕೊನೆಯುಸಿರೆಳೆದರು. ಕಾರಿನ ಡಿಕ್ಕಿಯ ರಭಸಕ್ಕೆ ಹಿಂಬದಿಯಲ್ಲಿ ಕುಳಿತಿದ್ದ ಪಾರ್ವತಿ ಅವರು ಸೇತುವೆಯಿಂದ ನದಿಗೆ ಬಿದ್ದಿದ್ದಾರೆ.
ಪ್ರಸ್ತುತ, ನಾಪತ್ತೆಯಾದ ಪಾರ್ವತಿ ಅವರಿಗಾಗಿ ನದಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಬನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.