ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ, ಕಿರುಕುಳ ವಿಡಿಯೋ ವೈರಲ್: ಮಣಿಪುರ ಉದ್ವಿಗ್ನ

ಇಂಫಾಲ್: ಜನಾಂಗೀಯ ಹಿಂಸಾಚಾರಕ್ಕೆ ನಲುಗಿದ ಮಣಿಪುರದಲ್ಲಿ ಮೇ 4 ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಪುರುಷರ ಗುಂಪೊಂದು ಲೈಂಗಿಕ ಕಿರುಕುಳ ನೀಡುತ್ತಿರುವ ವೀಡಿಯೊ ಕಾಣಿಸಿಕೊಂಡ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಮಧ್ಯೆ ಈ ಘಟನೆ ನಡೆದಿದ್ದು, ವಿಡಿಯೋ ಬಹಿರಂಗವಾದ ನಂತರ ಬೆಳಕಿಗೆ ಬಂದಿದೆ. ಈ ಮಹಿಳೆಯರು ಹೋರಾಡುತ್ತಿರುವ ಸಮುದಾಯಗಳಲ್ಲಿ ಒಂದಕ್ಕೆ ಸೇರಿದವರಾಗಿದ್ದಾರೆ.

ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ(ಐಟಿಎಲ್‌ಎಫ್) ಪ್ರತಿಭಟನಾ ಮೆರವಣಿಗೆ ಕೈಗೊಂಡ ಮುನ್ನಾದಿನದಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿದೆ.

ಈ ಕುರಿತು ಮಾತನಾಡಿದ ಮಣಿಪುರದ ಕೊಂಗ್‌ಕೋಪಿ ಗ್ರಾಮ ಎಸ್‌ಪಿ, ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಆರೋಪಿಗಳನ್ನು ಬಂಧಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ವೈರಲ್ ಆಗಿರುವ ವಿಡಿಯೋಗೆ ಸಂಬಂಧಿಸಿದಂತೆ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿದೆ.

ಮೇ 4 ರಂದು ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಸಂಭವಿಸಿದ ಹೇಯವಾದ ಕೃತ್ಯ ಇದಾಗಿದೆ. ಅಸಹಾಯಕ ಮಹಿಳೆಯರಿಗೆ ನಿರಂತರವಾಗಿ ಪುರುಷರು ಕಿರುಕುಳ ನೀಡುವುದನ್ನು ವಿಡಿಯೋ ತೋರಿಸುತ್ತದೆ ITLF ನ ವಕ್ತಾರರು ಹೇಳಿದ್ದಾರೆ.

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಯನ್ನು ಖಂಡಿಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಈಶಾನ್ಯ ರಾಜ್ಯದಲ್ಲಿನ ಜನಾಂಗೀಯ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮೌನ ಮತ್ತು ನಿಷ್ಕ್ರಿಯತೆ ಅಲ್ಲಿ ಅರಾಜಕತೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷ(ಎಎಪಿ) ಮಣಿಪುರದ ವಿಡಿಯೊ ಅತ್ಯಂತ ಆಘಾತಕಾರಿ ಎಂದು ಹೇಳಿದ್ದು, ಘಟನೆಯನ್ನು ಖಂಡಿಸಿದೆ. ಹಿಂಸಾಚಾರವನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read