ಮದ್ಯ ಸೇವಿಸಿಲ್ಲ, ಧೂಮಪಾನ ಮಾಡಲ್ಲ ಆದರೂ ಅಪಧಮನಿಗಳಲ್ಲಿ ಶೇ.80 ರಷ್ಟು ಬ್ಲಾಕೇಜ್ ; ವೈದ್ಯಕೀಯ ವರದಿ ನೋಡಿ ಟೆಕ್ಕಿಗೆ ಶಾಕ್ !

ಬೆಂಗಳೂರಿನ ಯುವ ಟೆಕ್ಕಿಯೊಬ್ಬನಿಗೆ ತಾನು ಆರೋಗ್ಯವಾಗಿದ್ದರೂ ಹೃದಯಾಘಾತಕ್ಕೀಡಾಗಿರುವುದು ಆಘಾತವನ್ನುಂಟು ಮಾಡಿದೆ. 28 ವರ್ಷದ ಈ ಯುವಕನ ಅಪಧಮನಿಗಳಲ್ಲಿ ಶೇ. 80 ರಷ್ಟು ಬ್ಲಾಕೇಜ್ ಕಂಡುಬಂದಿದ್ದು, ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ವಿಶೇಷವೆಂದರೆ, ಈತ ಧೂಮಪಾನಿಯಾಗಲಿ, ಮದ್ಯಪಾನಿಯಾಗಲಿ ಅಲ್ಲ. ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದರೂ ಈ ದುರಂತ ಸಂಭವಿಸಿದೆ.

ಬೆಂಗಳೂರಿನ ಟೆಕ್ ಕಂಪನಿಯೊಂದರಲ್ಲಿ ಡೇಟಾ ಸೈಂಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಈ ಯುವಕ, ತನ್ನ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಆತನ ಕೆಲಸವು ಒತ್ತಡ ರಹಿತವಾಗಿದ್ದು, ಮನೆಯಿಂದಲೇ ಕೆಲಸ ಮಾಡುವ ಅವಕಾಶವಿತ್ತು. ದಿನಕ್ಕೆ ಕೇವಲ ನಾಲ್ಕು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದ ಆತ, ಉಳಿದ ಸಮಯವನ್ನು ತನ್ನ ಆರೋಗ್ಯದ ಕಡೆಗೆ ಗಮನಹರಿಸುತ್ತಿದ್ದ. ಜಿಮ್‌ನಲ್ಲಿ ವ್ಯಾಯಾಮ ಮಾಡುವುದು ಮತ್ತು ಬೆಟ್ಟ ಹತ್ತುವುದು ಆತನಿಗೆ ಹವ್ಯಾಸವಾಗಿತ್ತು.

ಒಂದು ದಿನ, ಆತನಿಗೆ ಎದೆಯಲ್ಲಿ ಅಸ್ವಸ್ಥತೆ ಕಾಣಿಸಿಕೊಂಡಿತು. ಮೊದಲು ಸಣ್ಣ ವಿಷಯವೆಂದುಕೊಂಡರೂ, ನಂತರ ವೈದ್ಯರನ್ನು ಭೇಟಿಯಾದಾಗ ಹೃದಯಾಘಾತವಾಗಿರುವುದು ದೃಢಪಟ್ಟಿತು. ತನ್ನ ಯೌವನ ಮತ್ತು ಆರೋಗ್ಯಕರ ಜೀವನಶೈಲಿಯಿಂದಾಗಿ ಇದನ್ನು ನಂಬಲು ಆತನಿಗೆ ಕಷ್ಟವಾಯಿತು. ಆತನ ಕುಟುಂಬದಲ್ಲಿ ಯಾರಿಗೂ ಈ ಹಿಂದೆ ಹೃದಯ ಸಂಬಂಧಿ ಕಾಯಿಲೆಗಳ ಇತಿಹಾಸವಿರಲಿಲ್ಲ.

ಆರಂಭದಲ್ಲಿ ವೈದ್ಯರ ಮಾತನ್ನು ನಂಬದ ಆತ, ಮತ್ತೊಂದು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡಾಗಲೂ ಅದೇ ಫಲಿತಾಂಶ ಬಂದಿತು. ಅಷ್ಟೇ ಅಲ್ಲ, ಅಪಧಮನಿಗಳಲ್ಲಿ ಗಂಭೀರವಾದ ಬ್ಲಾಕೇಜ್ ಇದ್ದು, ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದರು. ತಕ್ಷಣವೇ ಆತನಿಗೆ ಸ್ಟೆಂಟ್ ಅಳವಡಿಸಲಾಯಿತು.

ಈ ಯುವಕನ ಸ್ಥಿತಿ ತಿಳಿದು ಆತನ ಪೋಷಕರು ಕಂಗಾಲಾಗಿದ್ದಾರೆ. ಯಾವುದೇ ದುಶ್ಚಟಗಳಿಲ್ಲದಿದ್ದರೂ ತನಗೇಕೆ ಹೀಗಾಯಿತು ಎಂದು ಆತ ಪ್ರಶ್ನಿಸುತ್ತಿದ್ದಾನೆ. ಕೆಲವರು ಕೋವಿಡ್-19 ಲಸಿಕೆಯ ಪರಿಣಾಮದಿಂದ ರಕ್ತ ಹೆಪ್ಪುಗಟ್ಟಿರಬಹುದು ಎಂದು ಶಂಕಿಸಿದ್ದಾರೆ.

ಈ ಘಟನೆಯಿಂದ ಎಚ್ಚೆತ್ತ ಈ ಯುವಕ, ಎಲ್ಲಾ ಯುವಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read