ಮಾತು ಬಾರದ ವಿದ್ಯಾರ್ಥಿಯೊಬ್ಬನಿಗೆ ಮನೆ ಪಾಠ ಹೇಳಿಕೊಡಲು ಬರುತ್ತಿದ್ದ ಶಿಕ್ಷಕನೊಬ್ಬ ಕೈ ಬೆರಳುಗಳ ಮಧ್ಯೆ ಪೆನ್ನಿಟ್ಟು ಹಿಂಸಿಸುತ್ತಿದ್ದ, ಬಾಯಿಗೆ ಮೆಣಸಿನ ಕಾಯಿ ತುರುಕಿ ಚಿತ್ರಹಿಂಸೆ ನೀಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ನೊಯ್ಡಾದಲ್ಲಿ ಈ ಘಟನೆ ನಡೆದಿದೆ. ಶುಭಂ ಸಕ್ಸೆನಾ ವಿದ್ಯಾರ್ಥಿಯನ್ನು ಹಿಂಸಿಸುತ್ತಿದ್ದ ಶಿಕ್ಷಕ. ಶಹಜಾನ್ ಪುರ ನಿವಾಸಿಯೊಬ್ಬರು ತಮ್ಮ ಮಗನಿಗೆ ಮಾತು ಬರಲ್ಲ, ಆತನಿಗೆ ಎಲ್ಲರಂತೆ ಶಾ-ಕಾಲೇಜುಗಳಿಗೆ ಕಳುಹಿಸಲು ಸಾಧ್ಯವಿಲ್ಲವೆಂದು ಮನೆಗೆ ಬಂದು ಮಗನಿಗೆ ಪಾಠ ಹೇಳಿಕೊಡಲು ಶಿಕ್ಷಕ ಶುಭಂ ನನ್ನು ನೇಮಿಸಿದ್ದರು.
ಎರದು ವರ್ಷಗಳಿಂದ ಮನೆಗೆ ಬಂದು ಶುಭಂ ಸಕ್ಸೆನಾ ವಿದ್ಯಾರ್ಥಿಗೆ ಪಾಠ ಮಾಡುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ವಿದ್ಯಾರ್ಥಿಯ ತಂದೆ ಶಿಕ್ಷಕ ಯಾವ ರೀತಿ ಪಾಠ ಹೇಳಿಕೊಡುತ್ತಾರೆ ಎಂಬುದನ್ನು ನೋಡಲು ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದ್ದಾರೆ. ಈ ವೇಳೆ ಶುಭಂ ತನ್ನ ಮಗನಿಗೆ ಬೆರಳುಗಳ ಮಧ್ಯೆ ಪೆನ್ ಇಟ್ಟು ಒತ್ತುತ್ತಿರುವುದನ್ನು, ಹೊಡೆಯುತ್ತಿರುವುದನ್ನು ಕಂಡಿದ್ದಾರೆ. ಅಷ್ಟೇ ಅಲ್ಲ, ಮಗನ ಬಾಯಿಗೆ ಮೆಣಸಿನಕಾಯಿ ತುರುಕಿ ಚಿತ್ರಹಿಂಸೆ ನೀಡುತ್ತಿದ್ದರು. ಆತ ಕೂಗಿಕೊಳ್ಳಲಾಗದೇ ಒದ್ದಾಡುತ್ತಿದ್ದರೂ ಬಿಟ್ಟಿಲ್ಲ. ಈ ದೃಶ್ಯಗಳನ್ನು ಕಂಡು ತಂದೆ ಶಾಕ್ ಆಗಿದ್ದಾರೆ.
ತಕ್ಷಣ ವಿದ್ಯಾರ್ಥಿ ತಂದೆ ಸೆಕ್ಟರ್ 49 ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಿಕ್ಷಕ ಎರಡು ವರ್ಷಗಳಿಂದ ತನ್ನ ಮಗನಿಗೆ ಇದೇ ರೀತಿ ಹಿಂಸೆ ನೀಡಿರುವ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಸಧ್ಯ ಪೊಲೀಸರು ಆರೋಪಿ ಶಿಕ್ಷಕ ಶುಭಂ ನನ್ನು ಬಂಧಿಸಿದ್ದಾರೆ.