ಬೆಂಗಳೂರು: ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರ ಪರವಾಗಿ ಮೇಲ್ಮನವಿ ಆದೇಶ ನೀಡಲು ಲಂಚ ಪಡೆಯುತ್ತಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ರಾಮಾನುಜ ಬಂಧಿತ ಅಧಿಕಾರಿ. ಚಿತ್ರದುರ್ಗ ಮೂಲದ ಡಿ.ಹೆಚ್. ಗುರುಪ್ರಸಾದ್ ಎಂಬುವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಶಾಂತಿನಗರದ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಲ್ಲಿ 25,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳೀ ಮಾಡಿ ರಾಮಾನುಜ ಅವರನ್ನು ಬಂಧಿಸಲಾಗಿದೆ. ದೂರುದಾರ ಡಿ.ಹೆಚ್. ಗುರುಪ್ರಸಾದ್ ಪರವಾಗಿ ಮೇಲ್ಮನವಿ ಆದೇಶ ನೀಡಲು ರಾಮಾನುಜ 75,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 25 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಹಣದ ಸಹಿತ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.