ಉತ್ತರ ಪ್ರದೇಶದ ಕಾನ್ಪುರದಲ್ಲಿ ಅನುಮಾನದ ಭೂತಕ್ಕೆ ಲಟ್ಟಣಿಗೆಯಿಂದ ಪತ್ನಿ ಪ್ರತ್ಯುತ್ತರ ನೀಡಿದ ಘಟನೆ ವರದಿಯಾಗಿದೆ. ಬಿಥೂರ್ ಪ್ರದೇಶದಲ್ಲಿ ವಾಸಿಸುವ ಕಾರ್ಖಾನೆ ಕೆಲಸಗಾರನೊಬ್ಬ ತನ್ನ ಪತ್ನಿಯ ಫೋನ್ ಕರೆಗಳನ್ನು ರಹಸ್ಯವಾಗಿ ಮೇಲ್ವಿಚಾರಣೆ ಮಾಡಲು ಪ್ರಯತ್ನಿಸಿ ತೀವ್ರ ಮುಖಭಂಗಕ್ಕೊಳಗಾಗಿದ್ದಾನೆ. ಪತ್ನಿ ಬೇರೆಯವರೊಂದಿಗೆ ಮಾತನಾಡುತ್ತಿದ್ದಾಳೆ ಎಂಬ ಅನುಮಾನದಿಂದ ಆತ ಆಕೆಯ ಮೊಬೈಲ್‌ನಲ್ಲಿ ಕರೆ ರೆಕಾರ್ಡಿಂಗ್ ಆಪ್ ಅನ್ನು ಇನ್‌ಸ್ಟಾಲ್ ಮಾಡಿದ್ದಾನೆ.
ಕಾರ್ಖಾನೆಯಿಂದ ಬಂದ ನಂತರ ಟೆರೇಸ್ ಮೇಲೆ ಕುಳಿತು ರೆಕಾರ್ಡಿಂಗ್ ಕೇಳುತ್ತಿದ್ದಾಗ ಪತ್ನಿಗೆ ಗೊತ್ತಾಗಿದೆ. ಕೋಪಗೊಂಡ ಪತ್ನಿ ಲಟ್ಟಣಿಗೆಯಿಂದ ಗಂಡನಿಗೆ ಹೊಡೆದು ಮನೆಯಿಂದ ಹೊರಹಾಕಿದ್ದಾಳೆ. ಭಯಭೀತನಾದ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪೊಲೀಸರು ವಿಚಾರಣೆ ನಡೆಸಿ ಪತಿಯ ಅನುಮಾನಕ್ಕೆ ಕಾರಣವಾದ ವ್ಯಕ್ತಿಯನ್ನು ಕರೆಸಿ ವಿಚಾರಿಸಿದ್ದಾರೆ. ಆ ವ್ಯಕ್ತಿ ತನಗೆ ಬೆಳೆದ ಮಗನಿರುವುದರಿಂದ ಬೇರೆಯವರ ಹೆಂಡತಿಯೊಂದಿಗೆ ಸಂಬಂಧ ಹೊಂದುವ ಅಗತ್ಯವಿಲ್ಲ ಎಂದು ಹೇಳಿ ಪತಿಯ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ತನ್ನ ತಪ್ಪನ್ನು ಅರಿತ ಪತಿ ಹೆಂಡತಿಗೆ ಕ್ಷಮೆ ಕೇಳಿದ್ದಾನೆ. ಪೊಲೀಸರ ಮಧ್ಯಸ್ಥಿಕೆಯಿಂದ ದಂಪತಿಗಳು ರಾಜಿ ಮಾಡಿಕೊಂಡಿದ್ದಾರೆ. ಪೊಲೀಸರು ಹೆಂಡತಿಯ ಫೋನ್‌ನಿಂದ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್ ಅನ್ನು ಅಳಿಸಿ ಹಾಕಿದ್ದಾರೆ.