ಬೆಂಗಳೂರು: ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕಾಂಗ್ರೆಸ್ ಶಾಸಕರ ಜೊತೆ ಹಾಗೂ ಕೆಲ ಸಚಿವರ ಜೊತೆ ಒನ್ ಟು ಒನ್ ಮೀಟಿಂಗ್ ನಡೆಸಿದ್ದರು. ಇದೀಗ ಕೆಲ ಸರ್ಕಾರಿ ಅಧಿಕಾರಿಗಳ ಜೊತೆಯೂ ಸಭೆ ನಡೆಸಿದಾರೆ ಎಂಬ ಆರೋಪ ಕೇಳಿಬಂದಿದೆ.
ರಾಜ್ಯಕ್ಕೆ ಆಗಮಿಸಿದ್ದ ಸುರ್ಜೇವಾಲಾ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು. ಈ ವೇಳೆ ಹೋಟೆಲ್ ನಲ್ಲಿ ಕೆಲ ಸರ್ಕಾರಿ ಅಧಿಕಾರಿಗಳ ಜೊತೆಯೂ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಕೆಲ ಸಚಿವರು ಅಧಿಕಾರಿಗಳಿಗೆ ವಾರ್ನಿಂಗ್ ಕೊಟ್ಟಿದ್ದು, ಸುರ್ಜೇವಾಲಾ ಜೊತೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗುವುದು ಸರಿಯಲ್ಲ ಎಂದಿದ್ದಾರೆ.
ಅಧಿಕಾರಿಗಳ ಜೊತೆ ಸುರ್ಜೇವಾಲಾ ಸಭೆ ವಿಚಾರವಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುರ್ಜೇವಾಲ ಕೆಲ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸಿದ್ದೇ ಆದರೆ ಅದು ಸಂವಿಧಾನ ಬಾಹಿರ ಕೃತ್ಯ ಎಂದಿದ್ದಾರೆ.
ಜೆಡಿಎಸ್ ಕೂಡ ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಸುರ್ಜೇವಾಲ ಅವರದ್ದು ಸಂವಿಧಾನ ವಿರೋಧಿ ಕೆಲಸ ಎಂದು ಕಿಡಿಕಾರಿದೆ.
ಎರಡು ವಾರ ರಾಜ್ಯದಲ್ಲಿ ವಾಸ್ತವ್ಯ ಹೂಡಿದ್ದ ರಣದೀಪ್ ಸಿಂಗ್ ಸುರ್ಜೇವಾಲ ಕಾಂಗ್ರೆಸ್ ಶಾಸಕರು, ಸಚಿವರ ಜೊತೆ ಸಭೆ ನಡೆಸಿದ್ದರು. ಈ ವೇಳೆ ಕೆಲ ಇಲಾಖೆಗಳ ಅಧಿಕಾರಿಗಳಿಗೆ ಕರೆಸಿ ಸಭೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.