ಜೈಪುರ: ರಾಜಸ್ಥಾನದ ಜಲಸಂಪನ್ಮೂಲ ಸಚಿವ ಸುರೇಶ್ ಸಿಂಗ್ ರಾವತ್ ಅವರ ಅಧಿಕೃತ ಬಂಗಲೆಗೆ ಚಿರತೆಯೊಂದು ನುಗ್ಗಿರುವ ಘಟನೆ ನಡೆದಿದೆ.
ಸಚಿವ ಸುರೇಶ್ ರಾವತ್ ಅವರ ಜೈಪುರದ ಬಂಗಲೆಗೆ ಚಿರತೆ ನುಗ್ಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಜೈಪುರದ ಹೈ ಸೆಕ್ಯೂರಿಟಿ ಸುವಿಲ್ಮ್ ಲೈನ್ ನಲ್ಲಿರುವ ಶಾಲೆ, ಸಚಿವರ ಬಂಗಲೆ ಸೇರಿದಂತೆ ವಸತಿ ಪ್ರದೇಶದ ಆವರಣದಲ್ಲಿ ಚಿರತೆ ಓಡಾಡುತ್ತಿತ್ತು. ಇದನ್ನು ಸಿಬ್ಬಂದಿಗಳು ಗಮನಿಸಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿದಾಗ ಚಿರತೆ ಬಂಗಲೆ ಪ್ರವೇಶಿಸಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲು ಟೈನಿ ಬ್ಲಾಸಮ್ ಸೀನಿಯರ್ ಸೆಕೆಂಡರಿ ಶಾಲೆಗೆ ಚಿರತೆ ಪ್ರವೇಶಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಿಬ್ಬಂದಿ ವಿದ್ಯಾರ್ಥಿಗಗಳಿರುವ ಕೊಠಡಿಗಳಿಗೆ ಬೀಗ ಹಾಕಿದ್ದಾರೆ. ಬಳಿಕ ಚಿರತೆ ಸುರೇಶ್ ರಾವತ್ ಅವರ ಬಂಗಲೆಗೆ ಪ್ರವೇಶಿಸಿದೆ ಎಂದು ವರದಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಬೀಡು ಬಿಟ್ಟಿದ್ದು, ಚಿರತೆಗಾಗಿ ಶೋಧ ನಡೆಸಿದ್ದಾರೆ. ಚಿರತೆಯನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆದಿದೆ ಎಂದು ಅರಣ್ಯಾಧಿಕಾರಿ ಜಿತೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.
