ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಇನ್ನೂ ಒಂದು ವಾರ ಮುಂದುವರೆಯಲಿದೆ. ದಕ್ಷಿಣ ಒಳನಾಡಿನ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಶುಕ್ರವಾರ ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗಿದೆ. ಹಾವೇರಿ, ಬಳ್ಳಾರಿ, ಕೋಲಾರ, ಗದಗ, ಶಿವಮೊಗ್ಗ, ವಿಜಯನಗರ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾದ ವರದಿಯಾಗಿದೆ.
ಹಾವೇರಿ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಗುಡುಗು ಮಿಂಚು ಸಹಿತ ಅರ್ಧ ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ವಿಜಯನಗರ ಜಿಲ್ಲೆ ಕೊಟ್ಟೂರು ಸುತ್ತಮುತ್ತಲಿನ ಪ್ರದೇಶ, ಬಳ್ಳಾರಿಯ ಸಂಡೂರು ತಾಲೂಕಿನ ವಿವಿಧೆಡೆ ಗುರುವಾರ ರಾತ್ರಿ ಮಳೆಯಾಗಿದೆ.
ಕೋಲಾರದಲ್ಲಿ ಶುಕ್ರವಾರ ಭಾರಿ ಮಳೆಯಿಂದ ಅನೇಕ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಗಿತ್ತು. ಕರಾವಳಿ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳನಾಡಿನ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.