ಬೆಂಗಳೂರು: ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದ ಸರ್ಕಾರ ಪ್ರತಿ ಟನ್ ಕಬ್ಬಿಗೆ ದರ ನಿಗದಿ ಮಾಡಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಕಬ್ಬು ಬೆಳೆಗಾರರು ಟನ್ ಕಬ್ಬಿಗೆ 3500 ರೂಪಾಯಿ ನಿಗದಿ ಮಾಡುವಂತೆ ಒತ್ತಾಯಿಸಿ ಉಗ್ರ ಹೋರಾಟ ನಡೆಸಿದ್ದರು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ಸಭೆ ನಡೆಸಿದ್ದು, ಸಭೆಯಲ್ಲಿ ಸರ್ಕಾರ 3300 ರೂಪಾಯಿ ದರ ನಿಗದಿಗೆ ನಿರ್ಧರಿಸಿದೆ.
ಪ್ರತಿ ಟನ್ ಕಬ್ಬಿಗೆ 3300 ರೂಪಾಯಿ ದರ ನಿಗದಿಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ಇದನ್ನು ಯಾವ ರೀತಿ ರೈತರಿಗೆ ಪಾವತಿಸಲಿದ್ದಾರೆ ಎಂಬ ಬಗ್ಗೆ ಅಧಿಕೃತ ಆದೇಶ ಪತ್ರವನ್ನು ಸರ್ಕಾರ ಹೊರಡಿಸಿದೆ.
ಸರ್ಕಾರದ ಆದೇಶ ಪತ್ರವನ್ನು ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಬೆಳಗಾವಿಯ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರ ಮುಖಂಡರಿಗೆ ನೀಡಿದರು. ಕಬ್ಬು ಬೆಲೆ ನಿಗದಿಗೆ ಸರ್ಕಾರ ಒಪ್ಪಿದ್ದು, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ರೈತರು ಹೋರಾಟ ಕೈಬಿಟ್ಟಿದ್ದಾರೆ.
