ಬೆಂಗಳೂರು: ಏಕಾಏಕಿ ನೈಸ್ ರಸ್ತೆಗಳ ಟೋಲ್ ದರ ಪರಿಷ್ಕರಿಸಿರುವ ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್(ನೈಸ್) ಗೆ ಸರ್ಕಾರ ನೋಟಿಸ್ ಜಾರಿ ಮಾಡಿದೆ.
ನೈಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಾಂದ್ರತೆ ಮತ್ತು ಸಂಗ್ರಹಿಸುತ್ತಿರುವ ವಿವರದ ಕುರಿತಾಗಿ ವರದಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಗೆ ಸೂಚನೆ ನೀಡಲಾಗಿದೆ.
ಸರ್ಕಾರಕ್ಕೆ ಮಾಹಿತಿ ನೀಡದೆ ಏಕಪಕ್ಷೀಯವಾಗಿ ಟೋಲ್ ದರ ಪರಿಷ್ಕರಣೆ ಮಾಡಿರುವದರಿಂದ ನೈಸ್ ಸಂಸ್ಥೆಗೆ ಲೋಕೋಪಯೋಗಿ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನೋಟಿಸ್ ಜಾರಿ ಮಾಡಿದ್ದಾರೆ. ಬಿಎಂಐಸಿ ಕಾರಿಡಾರ್ ಯೋಜನೆಯ ಕ್ರಿಯಾ ಒಪ್ಪಂದದ ಆರ್ಟಿಕಲ್ 64ರ ಪ್ರಕಾರ ಸರ್ಕಾರಕ್ಕೆ ಮಾಹಿತಿ ನೀಡಿ ದರ ಪರಿಷ್ಕರಿಸಬೇಕು. ಆದರೆ, ಸರ್ಕಾರಕ್ಕೆ ಸೂಚನೆ ನೀಡಿಲ್ಲ, ನೋಟಿಸ್ ಸ್ವೀಕೃತವಾಗಿಲ್ಲ. ಹೀಗಾಗಿ ಕ್ರಿಯಾ ಒಪ್ಪಂದದ ಪ್ರಕಾರ ಟೋಲ್ ದರ ಪರಿಷ್ಕರಣೆ ಆಗದಿರುವ ಕಾರಣ ದರ ಪರಿಷ್ಕರಣಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿ ನೋಟಿಸ್ ಜಾರಿ ಮಾಡಲಾಗಿದೆ.