ಬೆಂಗಳೂರು: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನಡೆಸುವ ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆ(ಪಿಜಿಇಟಿಎ) ಅಂಕಗಳ ಆಧಾರದ ಮೇಲೆಯೇ ಸ್ನಾತಕೋತ್ತರ ಅರ್ಕಿಟೆಕ್ಚರ್ ಪದವಿಗೆ ರಾಜ್ಯದಲ್ಲಿ ಪ್ರವೇಶ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ತೀರ್ಮಾನಿಸಿದೆ.
ಇದುವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ಪ್ರವೇಶ ಪರೀಕ್ಷೆ(ಪಿಜಿ ಸಿಇಟಿ) ನಡೆಸಿ ಅದರಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತಿತ್ತು. ಈ ವರ್ಷದಿಂದ ನಿಯಮ ಬದಲಾವಣೆ ಮಾಡಲಾಗಿದ್ದು, ಆಸಕ್ತರು ರಾಷ್ಟ್ರಮಟ್ಟದ ಪರೀಕ್ಷೆ ತೆಗೆದುಕೊಂಡು ಇಲ್ಲಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನ ತಿಳಿಸಿದ್ದಾರೆ.
ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಯಾವುದೇ ಪ್ರವೇಶ ಪರೀಕ್ಷೆ ನಡೆಸುವುದಿಲ್ಲ. ಹೀಗಾಗಿ ಆಸಕ್ತರು ರಾಷ್ಟ್ರಮಟ್ಟದ ಪರೀಕ್ಷೆ ತೆಗೆದುಕೊಳ್ಳಲು ಕೋರಲಾಗಿದೆ.