ಕೊಪ್ಪಳ: ಕೊಪ್ಪಳದ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಜಿಗಿದ ಬಾಲಕ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇಂದ್ರೇಶ್(17) ಮೃತಪಟ್ಟ ವಿದ್ಯಾರ್ಥಿ. ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಈಜುತ್ತಿದ್ದ ಇಂದ್ರೇಶ್ ಎತ್ತರದಿಂದ ಡೈವ್ ಮಾಡಿದಾಗ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವೇಳೆ ಘಟನೆ ನಡೆದಿದೆ.
ಕೆಲ ಸಮಯ ಈಜುಕೊಳದಲ್ಲಿ ಈಜಾಡಿದ ಇಂದ್ರೇಶ್ ಮೇಲಿನಿಂದ ಡೈವ್ ಹೊಡೆದಿದ್ದಾನೆ. ಈ ವೇಳೆ ತಲೆಗೆ ಪೆಟ್ಟು ಬಿದ್ದು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಇಂದ್ರೇಶ್ ಕಾಣದಿದ್ದಾಗ ಸ್ನೇಹಿತರು ಆತಂಕದಿಂದ ಈಜುಕೊಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈಜುಕೊಳದಲ್ಲೇ ಇಂದ್ರೇಶ್ ಮುಳುಗಿರುವುದು ಪತ್ತೆಯಾಗಿದೆ. ಆತನನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಈ ವೇಳೆಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.