ಬೆಂಗಳೂರು: ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿರುವುದನ್ನು ಖಂಡಿಸಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಕರೆ ನೀಡಲಾಗಿದ್ದ ಬಂದ್ ನ್ನು ವರ್ತಕರು ವಾಪಸ್ ಪಡೆದಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ವರ್ತಕರ ಸಂಘ, ಎಫ್ ಕೆ ಸಿಸಿಐ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ್ದ ಸಭೆ ಬಳಿಕ ಸಣ್ಣ ವರ್ತಕರು ಬಂದ್ ನಿರ್ಧಾರ ಕೈಬಿಡಲು ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಿಎಸ್ ಟಿ ನೋಟಿಸ್ ವಿಚಾರವಾಗಿ ಸಣ್ಣ ವರ್ತಕರು ಜುಲೈ 25ರಂದು ಕರೆ ನೀಡಿದ್ದ ಬಂದ್ ಹಿಂಪಡೆಯಲು ಒಪ್ಪಿದ್ದಾರೆ. ೪೦ ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರುಗೆ ತೆರಿಗೆ ನೋಟಿಸ್ ನೀಡಲಾಗಿತ್ತು. ಮೂರು ವರ್ಷಗಳ ಅರಿಯರ್ಸ್, ತೆರಿಗೆ ಪಾವತಿ ಸೇರಿದಂತೆ ಕೆಲ ಸಮಸ್ಯೆಗಳನ್ನು ಹೇಳಿದ್ದು, ಈ ಬಗ್ಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಲಾಗಿದೆ ಎಂದರು.
ಇನ್ಮುಂದೆ ಜಿಎಸ್ ಟಿ ನೋಂದಣಿ ಕಡ್ದಾಯವಾಗಿದ್ದು, ವಿನಾಯ್ತಿ ಇದ್ದವರಿಗೆ ನೋಂದಣಿ ಅಗತ್ಯವಿಲ್ಲ. ಬ್ರೆಡ್, ಹಾಲು, ತರಕಾರಿ, ಅಗತ್ಯವಸ್ತುಗಳಿಗೆ ಜಿಎಸ್ ಟಿ ಇರುವುದಿಲ್ಲ ಎಂದು ತಿಳಿಸಿದ್ದೇವೆ. ಇದಕ್ಕೆ ವ್ಯಾಪಾರಿಗಳು ಒಪ್ಪಿದ್ದಾರೆ. ಎಲ್ಲಾ ಮಾದರಿಯ ಹೋರಾಟ ಕೈಬಿಡಲು ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಿದರು.