ಚಿಕ್ಕಮಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೀದಿನಾಯಿಗಳ ದಾಳಿಯಿಂದ ಸಾರ್ವಜನಿಕರು ಸಂಕಷ್ಟಕ್ಕೀಡಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಬೀದಿನಾಯಿಗಳ ಹಾವಳಿ ನಿಯಂತ್ರಿಣಕ್ಕೆ ಕಡಿವಾಣ ಹಾಕುತ್ತಿಲ್ಲ. ಮಕ್ಕಳು ಸೇರಿದಂತೆ 35ಕ್ಕೂ ಹೆಚ್ಚು ಜನರ ಮೇಲೆ ಬೀದಿನಾಯಿ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಮೂರು ದಿನಗಳಕ್ಕಿ 35ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿ ದಾಳಿ ನಡೆಸಿ, ಜನರನ್ನು ಕಚ್ಚಿ ಗಾಯಗೊಳೀಸಿದೆ. ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆ, ಎಂ.ಜಿ.ರಸ್ತೆ ಸೇರಿದಂತೆ ಹಲವೆಡೆ ಬೀದಿನಾಯಿಗಳ ಹಾವಳಿಗೆ ಜನರು ಕಂಗಾಲಾಗಿದ್ದಾರೆ. ಕಳೆದ ಎರಡು ದಿನಗಳಲ್ಲಿ ಈ ಪ್ರದೇಶದಲ್ಲಿ 20 ಜನರ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ. ಗಾಯಾಳುಗಳನ್ನು ಮಲ್ಲೇಗೌಡ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ನಿನ್ನೆ ಒಂದೇ ದಿನದಲ್ಲಿ 8 ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಘಟನೆಯಲ್ಲಿ ಮೂರು ವರ್ಷದ ಮಗುವೊಂದು ಗಂಭೀರವಾಗಿ ಗಾಯಗೊಂಡಿದೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೀದಿನಾಯಿಗಳ ದಾಳಿಯಿಂದ ಜೀವ ಭಯದಲ್ಲಿ ಬದುಕುವಂತಾಗಿದೆ ಎಂದು ಸಾರ್ವಜನಿಕರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.