ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಗೆ ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿ ವರದಿಯನ್ನು ಸಿದ್ಧಪಡಿಸಿದ್ದು, ಅಂತಿಮ ವರದಿಯನ್ನು ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಶಿಕ್ಷಣ ನೀತಿ ಜಾರಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಪ್ರೊ. ಸುಖದೇವ್ ಥೋರಟ್ ನೇತೃತ್ವದ ಸಮಿತಿ ರಚಿಸಿದ ರಾಜ್ಯ ಶಿಕ್ಷಣ ನೀತಿಯ ಅಂತಿಮ ವರದಿ ಸಿದ್ದವಾಗಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಚಿವರು, ಅಧಿಕಾರಿಗಳ ಸಭೆಯಲ್ಲಿ ಅಂತಿಮವಾಗಿ ಒಮ್ಮೆ ಚರ್ಚೆ ನಡೆಸಿ ನಂತರ ಮುಖ್ಯಮಂತ್ರಿಗಳ ಸಮಯ ಕೇಳಿ ಒಂದೆರಡು ದಿನದಲ್ಲಿ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.