ನವದೆಹಲಿ: ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಅವರು ತಮ್ಮ ಪುತ್ರನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಾವು ಕಳೆದ ಒಂದು ವರ್ಷದಿಂದ ಮಗ ಜೊರಾವರ್ ಮುಖ ನೋಡಿಲ್ಲ ಎನ್ನುವ ಸಂಗತಿಯನ್ನು ಶಿಖರ್ ಧವನ್ ಬಹಿರಂಗಪಡಿಸಿದ್ದಾರೆ. 9 ವರ್ಷದ ಮಗನ ಭೇಟಿ ಮಾಡದಂತೆ ತಮ್ಮನ್ನು ತಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ನಿನ್ನನ್ನು ಮುಖತಃ ಭೇಟಿ ಮಾಡಿ ಒಂದು ವರ್ಷವೇ ಆಯಿತು. ಕಳೆದ ಮೂರು ತಿಂಗಳಿನಿಂದಲೂ ನಿನ್ನನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದೇನೆ. ಆದರೆ, ನನ್ನನ್ನು ತಡೆಯುತ್ತಿದ್ದಾರೆ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇಂತಿ ನಿನ್ನ ಪ್ರೀತಿಯ ಅಪ್ಪ’ ಎಂದು ಮಗನ ಫೋಟೋ ಜೊತೆ ಶಿಖರ್ ಧವನ್ ಬರೆದುಕೊಂಡಿದ್ದಾರೆ.
ಅಕ್ಟೋಬರ್ ನಲ್ಲಿ ಶಿಖರ್ ಧವನ್ ಮತ್ತು ಪತ್ನಿ ಆಯಿಶಾ ಮುಖರ್ಜಿ ವಿಚ್ಛೇದನ ಪಡೆದುಕೊಂಡಿದ್ದರು. ಈಗ ಮಗನ ಹುಟ್ಟುಹಬ್ಬಕ್ಕೆ ಅವರು ಹಾಕಿದ ಮನಕಲಕುವ ಪೋಸ್ಟ್ ವೈರಲ್ ಆಗಿದೆ.