ದಕ್ಷಿಣ ಕೊರಿಯಾವನ್ನು 2-1 ಗೋಲುಗಳಿಂದ ಸೋಲಿಸಿದ ಭಾರತ 2023 ರ ಮಹಿಳಾ ಹಾಕಿ ಜೂನಿಯರ್ ಏಷ್ಯಾ ಕಪ್ ಗೆದ್ದಿದೆ.
ಜಪಾನಿನ ಗಿಫು ಪ್ರಿಫೆಕ್ಚರ್‌ನ ಕಕಮಿಗಹರಾದಲ್ಲಿ ನಡೆದ ಮಹಿಳಾ ಜೂನಿಯರ್ ಏಷ್ಯಾಕಪ್‌ನಲ್ಲಿ ಭಾನುವಾರ ನಡೆದ ಆಕರ್ಷಕ ಫೈನಲ್‌ನಲ್ಲಿ ಭಾರತ ಜೂನಿಯರ್ ಮಹಿಳಾ ಹಾಕಿ ತಂಡವು ದಕ್ಷಿಣ ಕೊರಿಯಾವನ್ನು 2-1 ಸ್ಕೋರ್ ಲೈನ್ ನೊಂದಿಗೆ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಇದೇ ಮೊದಲ ಬಾರಿಗೆ ಭಾರತ ಮಹಿಳಾ ಜೂನಿಯರ್ ಏಷ್ಯಾಕಪ್ ಪ್ರಶಸ್ತಿ ಜಯಿಸಿದೆ. ಸೆಮಿಫೈನಲ್‌ನಲ್ಲಿ ಜಯಗಳಿಸುವ ಮೂಲಕ ಭಾರತ ಈಗಾಗಲೇ ನವೆಂಬರ್-ಡಿಸೆಂಬರ್‌ನಲ್ಲಿ ಚಿಲಿಯ ಸ್ಯಾಂಟಿಯಾಗೊದಲ್ಲಿ ವಿಶ್ವಕಪ್‌ಗೆ ಅರ್ಹತೆ ಪಡೆದಿತ್ತು.
ಭಾನುವಾರ, ಅಣ್ಣು (22′) ಮತ್ತು ನೀಲಂ (41′) ಗಳಿಸಿದ ಗೋಲುಗಳು ಭಾರತವನ್ನು ಗೆಲುವಿನತ್ತ ಕೊಂಡೊಯ್ದರೆ, ಪಾರ್ಕ್ ಸಿಯೋಯಾನ್ (24′) ವಿರಾಮದ ಮೊದಲು ಸಮಬಲ ಸಾಧಿಸಿದರು.
ಹಾಕಿ ಇಂಡಿಯಾ ಪ್ರತಿ ಆಟಗಾರರಿಗೆ 2 ಲಕ್ಷ ರೂ. ಮತ್ತು ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯರಿಗೆ 1 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿದೆ.
ತಂಡದ ನಾಯಕಿ ಪ್ರೀತಿ ಗೆಲುವಿನ ನಂತರ ಮಾತನಾಡಿ, ರೌಂಡ್-ರಾಬಿನ್ ಹಂತದಲ್ಲಿ 1-1 ಡ್ರಾ ನಂತರ, ನಾವು ಕೊರಿಯಾ ವಿರುದ್ಧ ಜಯಿಸಲು ಉತ್ತಮ ಪ್ರದರ್ಶನ ನೀಡಿದೆವು. ತಂಡವಾಗಿ ನಾವು ವಿಶೇಷವಾದದ್ದನ್ನು ಸಾಧಿಸಲು ಅತ್ಯುತ್ತಮ ಆಟವನ್ನು ಆಡಬೇಕು ಎಂದು ನಮಗೆ ತಿಳಿದಿತ್ತು. ನಾವು ಮಾಡಿದ್ದು ಅದನ್ನೇ. ನಮ್ಮ ರಾಷ್ಟ್ರವನ್ನು ಹೆಮ್ಮೆ ಪಡುವಂತೆ ಮಾಡಿದ್ದೇವೆ ಎಂದು ಹೇಳಿದ್ದಾರೆ.