ಬೆಂಗಳೂರು: 79ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ, ಹುಬ್ಬಳ್ಳಿ ಮತ್ತು ಕಾರೈಕ್ಕುಡಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಹುಬ್ಬಳ್ಳಿ ಟು ರಾಮೇಶ್ವರಂ ವಿಶೇಷ ರೈಲಿನ ಸಂಚಾರವನ್ನು ರಾಮನಾಥಪುರಂವರೆಗೆ ವಿಸ್ತರಿಸಲಾಗಿದೆ.
ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ತಮಿಳುನಾಡಿನ ಕಾರೈಕ್ಕುಡಿ ಜಂಕ್ಷನ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಲಾಗಿದೆ.
ವೇಳಾಪಟ್ಟಿ ಇಲ್ಲಿದೆ:
ರೈಲು ಸಂಖ್ಯೆ 07331 ಎಸ್‌ಎಸ್‌ಎಸ್ ಹುಬ್ಬಳ್ಳಿ ಟು ಕಾರೈಕ್ಕುಡಿ ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲು ಆ. 14ರಂದು (ಗುರುವಾರ) ಸಂಜೆ 4 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಿಗ್ಗೆ 11 ಗಂಟೆಗೆ ಕಾರೈಕ್ಕುಡಿ ತಲುಪಲಿದೆ.
ರೈಲು ಸಂಖ್ಯೆ 07332 ಕಾರೈಕ್ಕುಡಿ ಜಂಕ್ಷನ್ ಟು ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ವಿಶೇಷ ರೈಲು ಆ. 15ರಂದು (ಶುಕ್ರವಾರ) ಸಂಜೆ 6:45 ಕ್ಕೆ ಕಾರೈಕ್ಕುಡಿಯಿಂದ ಹೊರಟು ಮರುದಿನ ಮಧ್ಯಾಹ್ನ 2:40 ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ಆಗಮಿಸಲಿದೆ.
ಎಲ್ಲೆಲ್ಲಿ ನಿಲುಗಡೆ?
ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಎರಡೂ ದಿಕ್ಕುಗಳಲ್ಲಿ ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣವರ್, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ ಮತ್ತು ಪುದುಕ್ಕೊಟ್ಟೈನಲ್ಲಿ ನಿಲುಗಡೆ ಹೊಂದಲಿದೆ.
ಈ ರೈಲು 17 ಬೋಗಿಗಳನ್ನು ಹೊಂದಿದ್ದು, ಇದರಲ್ಲಿ 1 ಎಸಿ 2-ಟೈರ್, 1 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 3 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್‌ಡಿ ಬೋಗಿಗಳನ್ನು ಹೊಂದಿದೆ.
ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು ರಾಮನಾಥಪುರಂವರೆಗೆ ಸಂಚಾರ ಅವಧಿ ವಿಸ್ತರಣೆ
ಇನ್ನು ದಕ್ಷಿಣ ರೈಲ್ವೆಯಲ್ಲಿನ ಕಾರ್ಯಾಚರಣೆಯ ನಿರ್ಬಂಧಗಳಿಂದಾಗಿ, ರೈಲು ಸಂಖ್ಯೆ 07355/07356 ಎಸ್‌ಎಸ್‌ಎಸ್ ಹುಬಳ್ಳಿ-ರಾಮೇಶ್ವರಂ-ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಸಂಚಾರದ ಅವಧಿಯನ್ನು ವಿಸ್ತರಿಸಲಾಗಿದೆ. ಆದರೆ, ಈ ರೈಲು ರಾಮೇಶ್ವರಂ ಬದಲು ರಾಮನಾಥಪುರಂವರೆಗಷ್ಟೇ ಸಂಚರಿಸಲಿದೆ. ಈ ರೈಲು ಈಗಿರುವ ಸಮಯ ಮತ್ತು ನಿಲುಗಡೆಗಳೊಂದಿಗೆ ಸಂಚಾರ ಮುಂದುವರಿಸಲಿದೆ.
ಈ ಹಿಂದೆ ಆಗಸ್ಟ್ 30 ರವರೆಗೆ ಓಡಲು ಸೂಚಿಸಲಾಗಿದ್ದ ರೈಲು ಸಂಖ್ಯೆ 07355 ಎಸ್‌ಎಸ್‌ಎಸ್ ಹುಬ್ಬಳ್ಳಿ -ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಈಗ ಸೆಪ್ಟೆಂಬರ್ 27 ರವರೆಗೆ ನಾಲ್ಕು ಟ್ರಿಪ್‌ಗಳಿಗೆ ವಿಸ್ತರಿಸಲಾಗಿದೆ. ಈ ರೈಲು ರಾಮೇಶ್ವರಂ ಬದಲು ರಾಮನಾಥಪುರಂನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
ಆಗಸ್ಟ್ 31 ರವರೆಗೆ ಸಂಚರಿಸಲು ಸೂಚಿಸಲಾಗಿದ್ದ, ರೈಲು ಸಂಖ್ಯೆ 07356 ರಾಮೇಶ್ವರಂ – ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಈಗ ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 28 ರವರೆಗೆ ನಾಲ್ಕು ಟ್ರಿಪ್‌ಗಳಿಗೆ ಚಲಿಸಲಿದೆ. ಇದು ರಾಮೇಶ್ವರದ ಬದಲಿಗೆ ರಾಮನಾಥಪುರಂನಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ ಎಂದು ಮಾಹಿತಿ ನೀಡಿದೆ.