ದಾವಣಗೆರೆ: ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ .ಹರೀಶ್ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರ ವಿರುದ್ಧ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ.
ಹರೀಶ್ ವಿರುದ್ಧ ಎಸ್‌ಪಿ ಉಮಾ ಪ್ರಶಾಂತ್ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಗರದ ಜಿಲ್ಲಾ ವರದಿಗಾರರ ಕೂಟದಲ್ಲಿ ಮಂಗಳವಾರ ಸುದ್ದಿಗೋಷ್ಠಿಯ ವೇಳೆ ಶಾಸಕ ಬಿ.ಪಿ. ಹರೀಶ್ ಅವರು ಜಿಲ್ಲಾ ಎಸ್ಪಿ ಶಾಮನೂರು ಮನೆ ಕಾಯುವ ಪಮೇರಿಯನ್ ನಾಯಿಯಂತೆ ವರ್ತಿಸುತ್ತಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್‍ಪಿ ಉಮಾ ಪ್ರಶಾಂತ್ ದೂರು ದಾಖಲಿಸಿದ್ದಾರೆ.
ಶಾಮನೂರು ಮನೆತನದವರು ಒಂದೊಂದು ಗಂಟೆ ಗೇಟ್ ಕಾಯಿಸುತ್ತಾರೆ. ಶಾಸಕರನ್ನು ಕಂಡರೆ ಎಸ್‌ಪಿ ಮುಖ ತಿರುಗಿಸುತ್ತಾರೆ ಎಂದು ಹರೀಶ್ ಟೀಕಿಸಿದ್ದರು. ಹೀಗೆ ಹೇಳಿಕೆ ನೀಡಿದ ಹರೀಶ್ ವಿರುದ್ಧ ಕೆಟಿಜೆ ನಗರ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ ಗಳಡಿ ಹರೀಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಇಂದು ವಿಚಾರಣೆಗೆ ಹಾಜರಾಗುವಂತೆ ಶಾಸಕರಿಗೆ ನೋಟಿಸ್ ನೀಡಲಾಗಿದೆ.