ತಾಯಿಯ ಚಿತೆಯನ್ನೂ ಬಿಡದ ಮಗ, ಚಿನ್ನದ ಬಳೆಗಾಗಿ ಅಂತಿಮ ಸಂಸ್ಕಾರಕ್ಕೆ ಅಡ್ಡಿ | Shocking Video

ರಾಜಸ್ಥಾನದ ಕೋಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆಯ ಲೀಲಾ ಕಾ ಬಾಸ್ ಕಿ ಧಾನಿ ಗ್ರಾಮದಲ್ಲಿ ನಡೆದ ಒಂದು ಅಮಾನವೀಯ ಘಟನೆ ಇಡೀ ನಾಡನ್ನೇ ಬೆಚ್ಚಿ ಬೀಳಿಸಿದೆ. ಇಲ್ಲಿ ದುರಾಸೆಯ ಮಗನೊಬ್ಬ ತನ್ನ ಸ್ವಂತ ತಾಯಿಯ ಅಂತಿಮ ಸಂಸ್ಕಾರಕ್ಕೆ ಅಡ್ಡಿಪಡಿಸಿ, ಆಕೆಯ ಚಿತೆಯ ಮೇಲೆ ಮಲಗಿ ಬಳೆಗಾಗಿ ಪಟ್ಟು ಹಿಡಿದಿರುವ ಆಘಾತಕಾರಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೃತ ಭೂರಿ ದೇವಿ ಅವರ ಏಳು ಗಂಡು ಮಕ್ಕಳಲ್ಲಿ ಐದನೆಯವನಾದ ಓಂಪ್ರಕಾಶ್ ಎಂಬಾತನೇ ಈ ಕೃತ್ಯ ಎಸಗಿದ್ದಾನೆ. ಆರು ಜನ ಸಹೋದರರು ಒಂದೇ ಗ್ರಾಮದಲ್ಲಿ ವಾಸಿಸುತ್ತಿದ್ದರೆ, ಓಂಪ್ರಕಾಶ್ ಬೇರೆಡೆ ವಾಸವಾಗಿದ್ದನು. ಬಹಳ ಕಾಲದಿಂದಲೂ ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಭಿನ್ನಾಭಿಪ್ರಾಯಗಳಿದ್ದವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮನೆಯಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಭೂರಿ ದೇವಿಯ ಮೈಯಲ್ಲಿದ್ದ ಬೆಳ್ಳಿ ಬಳೆಗಳನ್ನು ತೆಗೆದು ಹಿರಿಯ ಮಗ ಗಿರ್ಧಾರಿ ಲಾಲ್ ಅವರಿಗೆ ನೀಡಲಾಗಿತ್ತು. ಆದರೆ, ಚಿತಭೂಮಿಗೆ ತಲುಪಿದ ನಂತರ ಓಂಪ್ರಕಾಶ್ ಏಕಾಏಕಿ ಗಲಾಟೆ ಮಾಡಲು ಪ್ರಾರಂಭಿಸಿದನು. ತಾಯಿಯ ಬೆಳ್ಳಿ ಬಳೆಗಳನ್ನು ತನಗೆ ನೀಡುವವರೆಗೂ ಅಂತ್ಯಕ್ರಿಯೆ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಚಿತೆಯ ಮೇಲೆ ಮಲಗಿದನು.

ಸಂಬಂಧಿಕರು ಮತ್ತು ಗ್ರಾಮಸ್ಥರು ಎಷ್ಟೇ ಸಮಾಧಾನಪಡಿಸಲು ಪ್ರಯತ್ನಿಸಿದರೂ ಓಂಪ್ರಕಾಶ್ ತನ್ನ ನಿರ್ಧಾರದಿಂದ ಕದಲಲಿಲ್ಲ. ಒಂದು ಹಂತದಲ್ಲಿ, ತಾಯಿಯ ದೇಹದೊಂದಿಗೆ ತಾನೂ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದನು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ನಡೆಯಬೇಕಿದ್ದ ಅಂತ್ಯಕ್ರಿಯೆಯು ಸುಮಾರು ಎರಡು ಗಂಟೆಗಳ ಕಾಲ ವಿಳಂಬವಾಯಿತು. ಅಂತಿಮವಾಗಿ, ಗ್ರಾಮಸ್ಥರು ಬಲವಂತವಾಗಿ ಓಂಪ್ರಕಾಶ್‌ನನ್ನು ಚಿತೆಯಿಂದ ಕೆಳಗಿಳಿಸಿ ಬಳಿಕ ಆತನಿಗೆ ಬಳೆಗಳನ್ನು ನೀಡಿದ ನಂತರ ಪರಿಸ್ಥಿತಿ ತಿಳಿಯಾಯಿತು.

ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಘಟನೆಯ ಬಗ್ಗೆ ಮಾಹಿತಿ ಇದ್ದು, ಕುಟುಂಬಸ್ಥರು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಓಂಪ್ರಕಾಶ್‌ನ ದುರಾಸೆ ಮತ್ತು ಕರುಣೆ ಇಲ್ಲದ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಆಸ್ತಿಗಾಗಿ ಸಂಬಂಧಗಳೇ ಹಾಳಾಗುವ ಇಂದಿನ ದಿನಗಳಲ್ಲಿ ಮನುಷ್ಯತ್ವ ಎಷ್ಟರ ಮಟ್ಟಿಗೆ ಕುಸಿಯುತ್ತಿದೆ ಎಂಬುದನ್ನು ತೋರಿಸುತ್ತದೆ. ಕುಟುಂಬದಲ್ಲಿನ ದೀರ್ಘಕಾಲದ ಸಮಸ್ಯೆಗಳು ಇಂತಹ ಹೀನ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read