ಮೈಸೂರು: ಕುಡಿಯಲು ಹಣ ಕೊಡದಿರುವುದಕ್ಕೆ ತಾಯಿಯನ್ನೇ ಪುತ್ರ ಕೊಲೆ ಮಾಡಿದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ.
ಗೌರಮ್ಮ(60) ಮೃತಪಟ್ಟ ಮಹಿಳೆ. ಸ್ವಾಮಿ(40) ಕೊಲೆ ಆರೋಪಿಯಾಗಿದ್ದಾನೆ. ಎರಡು ತಿಂಗಳ ಹಿಂದೆ ಮನೆಯಲ್ಲಿದ್ದ ಒಂದು ಜೊತೆ ದನಗಳನ್ನು ಗೌರಮ್ಮ ಮಾರಾಟ ಮಾಡಿದ್ದು, ಪತಿಯ ಚಿಕಿತ್ಸೆಗಾಗಿ 90 ಸಾವಿರ ರೂಪಾಯಿ ಇಟ್ಟುಕೊಂಡಿದ್ದರು. ಶನಿವಾರ ತಾಯಿಯ ಬಳಿ ಬಂದ ಪುತ್ರ ಸ್ವಾಮಿ ಕುಡಿಯಲು ಹಣ ಕೇಳಿದ್ದಾನೆ. ಗೌರಮ್ಮ ನನ್ನ ಬಳಿ ಹಣ ಇಲ್ಲ ಎಂದು ಕೊಡಲು ನಿರಾಕರಿಸಿದಾಗ ಕೈಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.