ಬೆಂಗಳೂರು: ಚಪ್ಪಲಿಯಲ್ಲಿ ಸೇರಿಕೊಂಡಿದ್ದ ಕೊಳಕುಮಂಡಲ ಹಾವು ಕಡಿದು ಟೆಕ್ಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನಲ್ಲಿ ನಡೆದಿದೆ.
ಆನೇಕಲ್ ತಾಲೂಕಿನ ಬನ್ನೇರುಘಟ್ಟದ ರಂಗನಾಥ ಬಡಾವಣೆಯ 41 ವರ್ಷದ ಟೆಕ್ಕಿ ಮಂಜು ಪ್ರಕಾಶ್ ಮೃತರು. ಕ್ಲಾಗ್ಸ್ ಚಪ್ಪಲಿ ಧರಿಸಿ ಮಂಜು ಪ್ರಕಾಶ್ ಮನೆಯಿಂದ ಹೊರ ಹೋಗಿದ್ದರು. ಅವರು ಧರಿಸಿದ್ದ ಚಪ್ಪಲಿಯಲ್ಲಿ ಕೊಳಕುಮಂಡಲ ಹಾವಿನ ಮರಿ ಸೇರಿಕೊಂಡಿತ್ತು. ಹಾವು ಕಚ್ಚಿ ಮಂಜು ಪ್ರಕಾಶ್ ಕೆಲ ಸಮಯದಲ್ಲೇ ಸಾವನ್ನಪ್ಪಿದ್ದಾರೆ.
ಮಂಜು ಪ್ರಕಾಶ್ ಅವರಿಗೆ 2016ರಲ್ಲಿ ಅಪಘಾತವಾಗಿ ಕಾಲಿನ ಸ್ಪರ್ಶಜ್ಞಾನ ಕಳೆದುಕೊಂಡಿದ್ದರು. ಹೀಗಾಗಿ ಚಪ್ಪಲಿಯಲ್ಲಿ ಸೇರಿಕೊಂಡಿದ್ದ ಹಾವು ಕಡಿದರೂ ಅವರಿಗೆ ಅದರ ಅರಿವಾಗಿಲ್ಲ. ಹಾವು ಕಾಲಿನ ಹೆಬ್ಬೆರಳಿಗೆ ಕಡಿದಿದೆ. ಅವರ ಕಾಲಿಗೆ ಸ್ಪರ್ಶಜ್ಞಾನವಿಲ್ಲದ್ದರಿಂದ ಹಾವು ಕಡಿದಿರುವುದು ಗೊತ್ತಗದೇ ಅವರು ಮುಕ್ಕಾಲು ಗಂಟೆ ಚಪ್ಪಲಿಯೊಳಗಿದ್ದ ಹಾವಿನೊಂದಿಗೆ ಓಡಾಡಿದ್ದಾರೆ. ಬಳಿಕ ಮನೆಗೆ ಬಂದು ಮಾಗಿದ್ದವರು ಮೇಲೆ ಎದ್ದಿಲ್ಲ. ಮಲಗಿದ್ದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಸಹೋದರ ತಿಳಿಸಿದ್ದಾರೆ.
ಕೆಲ ಸಮಯದ ಬಳಿಕ ಕಾರ್ಮಿಕನೊಬ್ಬ ಮನೆಗೆ ಬಂದಿದ್ದ ಈ ವೇಳೆ ಮಂಜು ಪ್ರಕಾಶ್ ಅವರ ಚಪ್ಪಲಿಯಲ್ಲಿ ಹಾವು ಇರುವುದನ್ನು ಕಂಡು ಅವರ ತಂದೆ-ತಾಯಿ ಗಮನಕ್ಕೆ ತಂದಿದ್ದಾರೆ. ಮಂಜು ಪ್ರಕಾಶ್ ಅವರನ್ನು ಕರೆಯಲು ಹೋದಾಗ ಮಲಗಿದ್ದ ಮಂಜು ಪ್ರಕಾಶ್ ಬಾಯಲ್ಲಿ ನೊರೆ ಬಂದಿತ್ತು. ಅಷ್ಟರಲ್ಲಿ ಅವರ ಉಸಿರು ನಿಂತು ಹೋಗಿತ್ತು. ಆಸ್ಪತ್ರೆಗೆ ಕರೆದೊಯ್ದಾಗ ಅವರು ಸಾವನ್ನಪ್ಪಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ ಎಂದು ಸಹೋದರ ಕಣ್ಣೀರಿಟ್ಟಿದ್ದಾರೆ.